ಬಾಂಗ್ಲಾ ವಿರುದ್ಧ ನಡೆದ ಎರಡನೇ ಟೆಸ್ಟ್ ನಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಡ್ರಾನಲ್ಲಿ ಅಂತ್ಯವಾಗಬೇಕಿದ್ದ ಪಂದ್ಯವನ್ನು ಗೆದ್ದು ಬೀಗಿದೆ.
ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ್ ನಡುವಿನ ಪಂದ್ಯ ಡ್ರಾ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಭಾರತದ ಕರಾರುವಾಕ್ ದಾಳಿ ಹಾಗೂ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ ತಂಡ ಗೆದ್ದು ಬೀಗಿದೆ.
ಈ ಪಂದ್ಯ ಡ್ರಾ ಆಗಲಿದೆ ಎಂದು ಸ್ವತಃ ಬಾಂಗ್ಲಾದೇಶ ಕೂಡ ಅಂದುಕೊಂಡಿತ್ತು. ಏಕೆಂದರೆ, ಮಳೆಯ ಕಾರಣ ಈ ಪಂದ್ಯ ಮೂರು ದಿನಗಳನ್ನು ಕಳೆದಿತ್ತು. ಉಳಿದ ಎರಡು ದಿನಗಳಲ್ಲಿ ಪಂದ್ಯದ ನಿರ್ಣಯ ಆಗಬೇಕಿತ್ತು. ನಾಲ್ಕನೇ ದಿನದಾಟದಲ್ಲಿ ಪ್ರಥಮ ಇನಿಂಗ್ಸ್ ಮುಂದುವರೆಸಿದ್ದ ಬಾಂಗ್ಲಾದೇಶ ತಂಡ 233 ರನ್ ಗಳಿಸಿ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಇನಿಂಗ್ಸ್ ಶುರು ಮಾಡಿದ ಭಾರತ ತಂಡ ಗೆದ್ದು ಬೀಗಿತು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (23) ಹಾಗೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ಒದಗಿಸಿದ್ದರು. ಪರಿಣಾಮ 18 ಎಸೆತಗಳಲ್ಲಿ 50 ರನ್ ಬಂದವು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಹಾಗೂ ಜೈಸ್ವಾಲ್ ಕೇವಲ 10.1 ಓವರ್ ಗಳಲ್ಲಿ ತಂಡದ ಸ್ಕೋರ್ ಅನ್ನು 100ರ ಗಡಿ ದಾಟಿಸಿದರು. 150 ರನ್ ಪೂರೈಸಲು ಭಾರತ ತಂಡ ತೆಗೆದುಕೊಂಡಿದ್ದು 18.2 ಓವರ್ ಗಳು ಮಾತ್ರ. 24.2 ಓವರ್ ಗಳಲ್ಲಿ 200 ರನ್ ಗಳನ್ನು ಕಲೆಹಾಕಿದರು. ಇದರ ನಡುವೆ ಶುಭ್ಮನ್ ಗಿಲ್ 39 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 51 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 72 ರನ್ ಗಳಿಸಿದರು. ನಂತರ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಸಹ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ ಕೇವಲ 30.1 ಓವರ್ಗಳಲ್ಲಿ 250 ರನ್ ಮೂಡಿಬಂತು. ಈ ವೇಳೆ 47 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಔಟಾದರು. ಕೆಎಲ್ ರಾಹುಲ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 43 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 68 ರನ್ ಗಳಿಸಿದರು. ಪರಿಣಾಮವಾಗಿ ಭಾರತ ತಂಡವು 34.4 ಓವರ್ ಗಳಲ್ಲಿ 285 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಭಾರತ ತಂಡವು 52 ರನ್ ಗಳ ಮುನ್ನಡೆ ಪಡೆಯಿತು. ನಾಲ್ಕನೇ ದಿನದಾಟದಲ್ಲೇ ಬಾಂಗ್ಲಾದೇಶ ತಂಡವನ್ನು ದ್ವಿತೀಯ ಇನಿಂಗ್ಸ್ಗೆ ಆಹ್ವಾನಿಸಲಾಯಿತು. ಈ ಮೂಲಕ ಕೊನೆಯ ದಿನದಾಟದೊಳಗೆ ಬಾಂಗ್ಲಾದೇಶ ತಂಡವನ್ನು ಆಲೌಟ್ ಮಾಡುವಲ್ಲಿ ಭಾರತ ಪ್ಲಾನ್ ಮಾಡಿತ್ತು.
ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು. ತಮ್ಮ ಅನುಭವವನ್ನು ಧಾರೆಯೆರೆದ ಅಶ್ವಿನ್ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ಇಬ್ಬರು ಬಾಂಗ್ಲಾ ಬ್ಯಾಟರ್ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. 26 ರನ್ ಗಳೊಂದಿಗೆ ಐದನೇ ದಿನದಾಟ ಶುರು ಮಾಡಿದ ಬಾಂಗ್ಲಾದೇಶ ತಂಡಕ್ಕೆ ಯಾರೂ ಆಸರೆಯಾಗಲಿಲ್ಲ. ಹೀಗಾಗಿ ಕೇವಲ 146 ರನ್ ಗಳಿಗೆ ಬಾಂಗ್ಲಾದೇಶ ಆಲೌಟ್ ಆಯಿತು.
ಕೇವಲ 94 ರನ್ ಗಳ ಗುರಿ ಪಡೆದ ಭಾರತ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಬಿರುಸಿನ ಹೊಡೆತಕ್ಕೆ ಮುಂದಾಗಿ ನಾಯಕ ರೋಹಿತ್ ಶರ್ಮಾ (8) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶುಭ್ಮನ್ ಗಿಲ್ (6) ಎಲ್ಬಿಡಬ್ಲ್ಯೂ ಆದರು.
ಆನಂತರ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ (29) ಅರ್ಧಶತಕದ ಜೊತೆಯಾಟವಾಡಿದರು. ಅಂತಿಮವಾಗಿ ಭಾರತ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತು.