ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ ಐತಿಹಾಸಿಕ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಭಾರತ ತಂಡ 295 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಇದು ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಗೆದ್ದ ಅತಿ ದೊಡ್ಡ ಗೆಲುವಾಗಿದೆ. 1977 ರಲ್ಲಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಭಾರತ ತಂಡ 222 ರನ್ ಗಳಿಂದ ಗೆಲುವು ಸಾಧಿಸಿತ್ತು. ಅಂದರೆ, ಈಗ ಬರೋಬ್ಬರಿ 47 ವರ್ಷಗಳ ನಂತರ ಭಾರತ ತಂಡ ದಾಖಲೆಯ ಐತಿಹಾಸಿಕ ಜಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ನಾಟಕೀಯ ಕುಸಿತ ಕಂಡಿತು. ಪರಿಣಾಮ ಕೇವಲ 150 ರನ್ ಗಳಿಗೆ ಆಲೌಟ್ ಆಯಿತು. ನಂತರ ಆಸ್ಟ್ರೇಲಿಯಾ ಕೂಡ ಭಾರತೀಯ ಬೌಲರ್ ಗಳ ಎದುರು ಮಂಡಿಯೂರಿದರು. ಪರಿಣಾಮ 104 ರನ್ ಗಳಿಗೆ ಆಲೌಟ್ ಆಯಿತು. ಬುಮ್ರಾ 30 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಹೀಗಾಗಿ 46 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ 6 ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಪರಿಣಾಮ ಆಸ್ಟ್ರೇಲಿಯಾ ತಂಡ 534 ರನ್ ಗಳ ಗುರಿ ಪಡೆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಪರಿಣಾಮ 3ನೇ ದಿನದಾಟದ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು 12 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿದಿತ್ತು. ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ 238 ರನ್ ಸರ್ವಪತನ ಕಂಡಿತು. ಈ ಮೂಲಕ ಭಾರತ ತಂಡ 295 ರನ್ ಗಳಿಂದ ಜಯ ಸಾಧಿಸಿತು.