ಕೊಲಂಬೊ : ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಹಲವು ರಾಜಕೀಯ ವಿವಾದಗಳು ಮತ್ತು ಗೊಂದಲಗಳ ನಂತರ ಕಡೆಗೂ ಈ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. 2025ರ ಏಷ್ಯಾ ಕಪ್ ಫೈನಲ್ ಬಳಿಕ ಇತ್ತಂಡಗಳು ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಮನೆ ಮಾಡಿದೆ.
ಆದರೆ, ಈ ಪಂದ್ಯಕ್ಕೆ ಮಳೆ ಮತ್ತು ಪಿಚ್‌ನ ಸ್ವರೂಪ ದೊಡ್ಡ ಅಡ್ಡಿಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಎರಡೂ ತಂಡಗಳಿಗೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಿದೆ.
ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಲಿದೆಯೇ ಸ್ಪಿನ್ ಪಿಚ್?
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಸ್ವರ್ಗ ಎನ್ನಲಾಗುತ್ತದೆ. ಈ ಪಂದ್ಯಕ್ಕೆ ವಿಶೇಷವಾಗಿ ಶುಕ್ರವಾರ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಪಂದ್ಯಕ್ಕೆ ಬಳಸಲಾದ ಅದೇ ಒಣ ಪಿಚ್ (Dry Pitch) ಅನ್ನೇ ಬಳಸಲಾಗುತ್ತಿದೆ. ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಕೇವಲ 169 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಂಡು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನೇ ಮಣಿಸಿತ್ತು. ಇದು ಪಿಚ್‌ನ ಕಠಿಣತೆಯನ್ನು ತೋರಿಸುತ್ತದೆ.
ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಎದುರು ಭಾರತೀಯ ಬ್ಯಾಟರ್‌ಗಳು ಹೇಗೆ ಆಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಏಕೆಂದರೆ ಹಿಂದಿನ ಎರಡು ಪಂದ್ಯಗಳಲ್ಲಿಯೂ ಭಾರತೀಯ ಬ್ಯಾಟರ್‌ಗಳು ಸ್ಪಿನ್ನರ್‌ಗಳ ಎದುರು ಪರದಾಡಿದ್ದರು. ಹೀಗಾಗಿ, ಭಾನುವಾರದ ಪಂದ್ಯದಲ್ಲಿ ದೊಡ್ಡ ಮೊತ್ತ ನಿರೀಕ್ಷಿಸುವುದು ಕಷ್ಟ ಎನ್ನಲಾಗುತ್ತಿದೆ.
ಪಂದ್ಯಕ್ಕೆ ಮಳೆ ಅಡ್ಡಿ?
ಕೊಲಂಬೊ ಹವಾಮಾನ ಇಲಾಖೆಯ ವರದಿಯು ಅಭಿಮಾನಿಗಳಿಗೆ ತುಸು ಆತಂಕ ತಂದಿದೆ. ಭಾನುವಾರ ಸಂಜೆ ಕೊಲಂಬೊದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಶೇ. 50 ರಷ್ಟಿದೆ. ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಮಳೆ ಆರಂಭವಾಗುವ ಮುನ್ಸೂಚನೆಯಿದ್ದು, ಪಂದ್ಯವು ರಾತ್ರಿ 7 ಗಂಟೆಗೆ ಶುರುವಾಗಬೇಕಿದೆ. ಒಂದು ವೇಳೆ ಮಳೆ ಅಡ್ಡಿಪಡಿಸಿದರೆ ಪಂದ್ಯದ ಓವರ್‌ಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ.
ಸಂಭಾವ್ಯ ಆಡುವ ಬಳಗ (Probable XI)
ಭಾರತ ತಂಡ |
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ.
ಪಾಕಿಸ್ತಾನ ತಂಡ |
ಸೈಮ್ ಅಯೂಬ್, ಸಾಹಬ್ಜಾದಾ ಫರ್ಹಾನ್, ಸಲ್ಮಾನ್ ಅಲಿ ಅಘಾ (ನಾಯಕ), ಬಾಬರ್ ಅಜಮ್, ಉಸ್ಮಾನ್ ಖಾನ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಶಾ ಆಫ್ರಿದಿ, ಸಲ್ಮಾನ್ ಮಿರ್ಜಾ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.
ಇತಿಹಾಸವನ್ನು ಗಮನಿಸಿದರೆ ಭಾರತವೇ ಮೇಲುಗೈ ಸಾಧಿಸಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇತ್ತಂಡಗಳು 16 ಬಾರಿ ಮುಖಾಮುಖಿಯಾಗಿದ್ದು, ಭಾರತ 13 ಪಂದ್ಯಗಳಲ್ಲಿ ಜಯ ಗಳಿಸಿದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳಲ್ಲಿ ಗೆದ್ದಿದೆ. ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲೂ ಭಾರತವೇ ಸರ್ವೋಚ್ಚವಾಗಿದ್ದು, ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಭಾರತ ವಿಜಯ ಸಾಧಿಸಿದೆ. ಪಾಕಿಸ್ತಾನಕ್ಕೆ ಒಲಿದಿರುವುದು ಕೇವಲ ಒಂದು ಗೆಲುವು ಮಾತ್ರ. ಅಮೆರಿಕ ಮತ್ತು ನಮೀಬಿಯಾವನ್ನು ಮಣಿಸಿರುವ ಭಾರತ, ಪಾಕ್ ವಿರುದ್ಧವೂ ಅದೇ ಆಕ್ರಮಣಕಾರಿ ಆಟ ಮುಂದುವರಿಸಲಿದೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : ನಾಡಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ | ರಾಯಚೂರಿನ ದೇವಾಲಯಗಳಲ್ಲಿ ಶಿವನಿಗೆ ವಿಶೇಷ ಪೂಜೆ


















