ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ, ‘ಕ್ರಿಕೆಟ್ ಕಾಶಿ’ ಎಂದೇ ಪ್ರಸಿದ್ಧವಾಗಿರುವ ಲಾರ್ಡ್ಸ್ ಮೈದಾನದಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಏಷ್ಯಾದ ಆರಂಭಿಕ ಬ್ಯಾಟ್ಸ್‌ಮನ್ ಎಂಬ ವಿಶೇಷ ದಾಖಲೆಯನ್ನು ಕನ್ನಡಿಗ ರಾಹುಲ್ ಬರೆದಿದ್ದಾರೆ. ಇದು ಅವರ ಟೆಸ್ಟ್ ವೃತ್ತಿಜೀವನದ 10ನೇ ಶತಕವಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಾಹುಲ್ ಗಳಿಸಿದ ಎರಡನೇ ಶತಕ ಇದಾಗಿದೆ. ಅವರು 177 ಎಸೆತಗಳಲ್ಲಿ ಮೂರಂಕಿ ವೈಯಕ್ತಿಕ ಮೊತ್ತವನ್ನು ತಲುಪಿದರೂ, ಶತಕ ಬಾರಿಸಿದ ತಕ್ಷಣ ಶೋಯೆಬ್ ಬಷೀರ್‌ಗೆ ವಿಕೆಟ್ ಒಪ್ಪಿಸಿದರು. ಆದರೂ, ಈ ಶತಕದ ಮೂಲಕ ರಾಹುಲ್ ಲಾರ್ಡ್ಸ್‌ನಲ್ಲಿ ನೂತನ ಮೈಲಿಗಲ್ಲು ತಲುಪಿದ್ದಾರೆ.
ಲಾರ್ಡ್ಸ್ ಅಂಗಣದಲ್ಲಿ ಎರಡು ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಈ ಮೊದಲು, ಭಾರತದ ದಿಗ್ಗಜ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಮಾತ್ರ ಲಾರ್ಡ್ಸ್‌ನಲ್ಲಿ ಎರಡು ಶತಕಗಳನ್ನು ಸಿಡಿಸಿದ್ದರು.
ಏಷ್ಯಾದ ಮೊದಲ ಆರಂಭಿಕ ಆಟಗಾರನಾಗಿ ದಾಖಲೆ
ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ಎರಡು ಶತಕಗಳನ್ನು ಬಾರಿಸಿದ ಏಷ್ಯಾದ ಮೊದಲ ಆರಂಭಿಕ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೆ.ಎಲ್. ರಾಹುಲ್ ಬರೆದಿರುವುದು ಗಮನಾರ್ಹ. ಈ ಮೈದಾನದಲ್ಲಿ ಯಾವುದೇ ಏಷ್ಯಾದ ಆರಂಭಿಕ ಬ್ಯಾಟ್ಸ್‌ಮನ್ ಇದುವರೆಗೆ ಒಂದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿರಲಿಲ್ಲ. ದಿಲೀಪ್ ವೆಂಗ್ಸರ್ಕಾರ್ ಲಾರ್ಡ್ಸ್‌ನಲ್ಲಿ ಒಟ್ಟು ಮೂರು ಶತಕಗಳನ್ನು ಬಾರಿಸಿದ್ದರೂ, ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡಿರಲಿಲ್ಲ.
ಕೆ.ಎಲ್. ರಾಹುಲ್ ತಮ್ಮ ಮೊದಲ ಟೆಸ್ಟ್ ಶತಕವನ್ನು 2021ರಲ್ಲಿ ಇದೇ ಲಾರ್ಡ್ಸ್‌ನಲ್ಲಿ ಗಳಿಸಿದ್ದರು. ಆ ಶತಕದ ಸಹಾಯದಿಂದ ಭಾರತ ತಂಡ 364 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತ್ತು. ಆ ಪಂದ್ಯವನ್ನು ಭಾರತ 272 ರನ್‌ಗಳ ಗುರಿಯನ್ನು ಕಾಪಾಡಿಕೊಂಡು 151 ರನ್‌ಗಳಿಂದ ಗೆದ್ದುಕೊಂಡಿತ್ತು.
ರಾಹುಲ್ ಭರ್ಜರಿ ಫಾರ್ಮ್ ಮುಂದುವರಿಕೆ
ಕೆ.ಎಲ್. ರಾಹುಲ್ ಇಂಗ್ಲೆಂಡ್ ನೆಲದಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 42 ಮತ್ತು 137 ರನ್‌ಗಳನ್ನು ಗಳಿಸಿದ್ದ ಅವರು, ನಂತರ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಲಾರ್ಡ್ಸ್‌ನಲ್ಲಿ ಪ್ರಥಮ ಇನ್ನಿಂಗ್ಸ್‌ನಲ್ಲಿ ಶತಕವನ್ನು ಬಾರಿಸುವ ಮೂಲಕ ತಮ್ಮ ಅಮೋಘ ಫಾರ್ಮ್ ಅನ್ನು ಪ್ರದರ್ಶಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅವರಿಗೆ ಬ್ಯಾಟ್ ಮಾಡುವ ಅಗತ್ಯ ಬರುವುದೋ ಇಲ್ಲವೋ ಕಾದು ನೋಡಬೇಕು.



















