ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿದ ಬುಮ್ರಾ, ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಅವರ ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಗೆ ಭಾಜನರಾಗಿದ್ದಾರೆ.
ಪಂದ್ಯದ ಮೊದಲ ದಿನ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆದಿದ್ದ ಬುಮ್ರಾ, ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ಕ್ರಿಸ್ ವೋಕ್ಸ್ ಮತ್ತು ಜೋಫ್ರಾ ಆರ್ಚರ್ ಅವರ ವಿಕೆಟ್‌ಗಳನ್ನೂ ಪಡೆದು ಐದು ವಿಕೆಟ್‌ಗಳ ಸಾಧನೆ ಮಾಡಿದರು. ಈ ಇನ್ನಿಂಗ್ಸ್‌ನಲ್ಲಿ ಬುಮ್ರಾ ಒಟ್ಟು 27 ಓವರ್‌ಗಳನ್ನು ಬೌಲ್ ಮಾಡಿ 74 ರನ್ ನೀಡಿ 5 ವಿಕೆಟ್ ಪಡೆದರು.
ಜೋ ರೂಟ್ ವಿಕೆಟ್ ಕಿತ್ತು ದಾಖಲೆ
199 ಎಸೆತಗಳಲ್ಲಿ 104 ರನ್‌ಗಳನ್ನು ಗಳಿಸಿದ್ದ ಜೋ ರೂಟ್, ಜಸ್‌ಪ್ರೀತ್ ಬುಮ್ರಾಗೆ ಬೌಲ್ಡ್ ಆದರು. ಇದರೊಂದಿಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರನ್ನು 11ನೇ ಬಾರಿಗೆ ಔಟ್ ಮಾಡಿದ ಸಾಧನೆಯನ್ನು ಬುಮ್ರಾ ಮಾಡಿದರು. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಕೂಡ 11 ಬಾರಿ ರೂಟ್ ಅವರನ್ನು ಔಟ್ ಮಾಡಿದ್ದು, ಈ ಪಟ್ಟಿಯಲ್ಲಿ ಇಬ್ಬರೂ ಜಂಟಿ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ, ಟಿ20ಐ) ಜೋ ರೂಟ್ ಅವರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಎಂಬ ದಾಖಲೆಯನ್ನು ಜಸ್‌ಪ್ರೀತ್ ಬುಮ್ರಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಬುಮ್ರಾ ಒಟ್ಟು 15 ಬಾರಿ ಜೋ ರೂಟ್ ಅವರನ್ನು ಔಟ್ ಮಾಡಿದ್ದಾರೆ (ಟೆಸ್ಟ್‌ನಲ್ಲಿ 11 ಬಾರಿ, ಏಕದಿನ ಕ್ರಿಕೆಟ್‌ನಲ್ಲಿ 3 ಬಾರಿ, ಮತ್ತು ಟಿ20ಐನಲ್ಲಿ 1 ಬಾರಿ). ಈ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ 14 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್‌ಗಳು:
- ಜಸ್‌ಪ್ರೀತ್ ಬುಮ್ರಾ: 15 ವಿಕೆಟ್‌ಗಳು
- ಪ್ಯಾಟ್ ಕಮಿನ್ಸ್: 14 ವಿಕೆಟ್‌ಗಳು
- ಜಾಶ್ ಹೇಝಲ್‌ವುಡ್: 13 ವಿಕೆಟ್‌ಗಳು
- ರವೀಂದ್ರ ಜಡೇಜಾ: 13 ವಿಕೆಟ್‌ಗಳು
- ಟ್ರೆಂಟ್ ಬೌಲ್ಟ್: 12 ವಿಕೆಟ್‌ಗಳು



















