ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಮೋಘ ಅಭಿಯಾನ ಮುಂದುವರಿದಿದೆ. ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ರೋಹಿತ್ ಪಡೆ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಆದರೆ, ತನ್ನ ಎಲ್ಲಾ ಪಂದ್ಯಗಳನ್ನು ದುಬೈನ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡುವುದರಿಂದ ಮೆನ್ ಇನ್ ಬ್ಲ್ಯೂ ಲಾಭ ಪಡೆಯುತ್ತಿದೆ (IND vs AUS) ಎಂಬ ಚರ್ಚೆಯೊಂದು ಜೋರಾಗಿ ನಡೆಯುತ್ತಿದೆ. ಹಲವರು ಐಸಿಸಿ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಲಾಭವಾಗುತ್ತಿದೆ ಎಂಬ ಚರ್ಚೆಯನ್ನು ನಾಯಕ ರೋಹಿತ್ ಶರ್ಮಾ (Rohit Sharma) ತಿರಸ್ಕರಿಸಿದ್ದಾರೆ. ಇದು ನಮ್ಮ ತವರು ಮೈದಾನವಲ್ಲ ಮತ್ತು ಪಿಚ್‌ಗಳು ವಿಭಿನ್ನ ಸವಾಲುಗಳನ್ನು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.
ಭಾರತ ತಂಡ ಒಂದೇ ಸ್ಥಳದಲ್ಲಿ ಆಡುವುದರಿಂದ ಬೇರೆ ತಂಡಗಳಿಗಿಂತ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ನೆರವಾಗುತ್ತಿದೆ ಎಂದು ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಮಾಜಿ ಆಟಗಾರರು ಗಂಭೀರ ಆರೋಪ ಮಾಡಿದ್ದರು. ಅವರೆಲ್ಲರಿಗೂ ರೋಹಿತ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿದ ರೋಹಿತ್ ಶರ್ಮಾ. “ಪ್ರತಿ ಬಾರಿಯೂ ಪಿಚ್ ವಿಭಿನ್ನ ಸವಾಲನ್ನು ಒಡ್ಡುತ್ತದೆ. ಇಲ್ಲಿ ಮೂರು ಪಂದ್ಯಗಳನ್ನು ಆಡಿದ್ದೇವೆ ಮತ್ತು ಮೂರು ಪಂದ್ಯಗಳಲ್ಲಿ ಪಿಚ್‌ನ ಸ್ವರೂಪ ವಿಭಿನ್ನವಾಗಿತ್ತು ಎಂದು ಹೇಳಿದ್ದಾರೆ.
”ಇದು ತಮ್ಮ ತವರಿಗೆ ಕ್ರೀಡಾಂಗಣವಲ್ಲ. ನಾವು ಇಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ನಮಗೂ ಹೊಸದು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ಗೆ ಮುನ್ನ ತಮ್ಮ ತಂಡವು ಪರಿಸ್ಥಿತಿಗಳಿಗೆ ತಕ್ಷಣವೇ ಹೊಂದಿಕೊಳ್ಳಬೇಕಾಗುತ್ತದೆ,” ಎಂದು ಹೇಳಿದ್ದಾರೆ.
”ಇಲ್ಲಿ ನಾಲ್ಕು ಅಥವಾ ಐದು ಪಿಚ್‌ಗಳನ್ನು ಬಳಸಲಾಗುತ್ತಿದೆ. ಸೆಮಿಫೈನಲ್‌ನಲ್ಲಿ ಪಿಚ್ ಹೇಗಿರುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಅದು ಏನೇ ಇರಲಿ, ನಾವು ಅದಕ್ಕೆ ಹೊಂದಿಕೊಂಡು ಆಡಬೇಕಾಗುತ್ತದೆ,” ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೆಂಡು ಸ್ವಿಂಗ್ ಆಗುತ್ತಿತ್ತು
ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದ ಉದಾಹರಣೆಯಾಗಿ ತೆಗೆದುಕೊಂಡ ರೋಹಿತ್ “ಇಲ್ಲಿ ಚೆಂಡು ಸ್ವಿಂಗ್ ಆಗುತ್ತಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಈ ರೀತಿ ಇರಲಿಲ್ಲ. ಕಳೆದ ಪಂದ್ಯದಲ್ಲಿ ಅಷ್ಟೊಂದು ಸ್ಪಿನ್ ಆಗುತ್ತಿರಲಿಲ್ಲ. ಆದ್ದರಿಂದ ವಿಭಿನ್ನ ಪಿಚ್‌ಗಳಲ್ಲಿ ವಿಭಿನ್ನ ಸವಾಲುಗಳಿವೆ. ಪಿಚ್ ಹೇಗಿರುತ್ತದೆಯೋ ಇಲ್ಲವೋ ನಮಗೆ ತಿಳಿದಿಲ್ಲ,” ಎಂದು ಟೀಮ್ ಇಂಡಿಯಾ ನಾಯಕ ವಿವರಿಸಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ಮನೆಗೆ ಹೊಸ ಅತಿಥಿ!
“ಸವಾಲಿನ ಪಿಚ್‌ಗಳು ಒಳ್ಳೆಯದು ಏಕೆಂದರೆ ನಾವು ಉತ್ತಮ ಪಂದ್ಯಗಳನ್ನು ಬಯಸುತ್ತೇವೆ,” ಎಂದು ಹೇಳಿದ ಅವರು, ತಂಡದಲ್ಲಿ ಐದು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡರು. ಐಎಲ್‌ಟಿ 20 ಪಂದ್ಯಗಳನ್ನು ನೋಡಿದ ಮೇಲೆ ದುಬೈನಲ್ಲಿನ ಪಿಚ್‌ಗಳ ಬಗ್ಗೆ ತಿಳಿಯಿತು,” ಎಂದು ಅವರು ಹೇಳಿದ್ದಾರೆ.
“ದುಬೈ ಪಿಚ್‌ಗಳು ನಿಧಾನಗತಿಯದ್ದು ಎಂಬುದು ನಮಗೆ ಗೊತ್ತಿದೆ. ಹೀಗಾಗಿ ಸ್ಪಿನ್ನರ್‌ಗಳು ಸಹಾಯಕವಾಗುತ್ತಾರೆ ಎಂದು ನಾವು ಭಾವಿಸಿದೆವು. ನಮಗೆ ಹೆಚ್ಚುವರಿ ಬ್ಯಾಟ್ಸ್‌ಮನ್ ಬೇಕಾದರೆ ರಿಷಭ್ ಪಂತ್ ಇದ್ದಾರೆ, ಆದ್ದರಿಂದ ನಾವು ಹೆಚ್ಚುವರಿ ಸ್ಪಿನ್ನರ್ ಆಯ್ಕೆ ಮಾಡಿಕೊಂಡೆವು,” ಎಂದು ರೋಹಿತ್ ಶರ್ಮಾ ವಿವರಿಸಿದ್ದಾರೆ.