ಬೆಂಗಳೂರು: ಇತ್ತೀಚೆಗೆ ಸಣ್ಣ ಸಣ್ಣ ವಿಚಾರಕ್ಕೂ ವಿಚ್ಛೇದನಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ. ಕ್ಷುಲ್ಲಕ ಕಾರಣವೂ ವಿಚ್ಛೇದನಕ್ಕೆ ಕಾರಣವಾಗುತ್ತಿರುವುದು ಭಯಾನಕವಾಗುತ್ತಿದೆ. ಕೌಟುಂಬಿಕ ಕಲಹ, ಅನುಮಾನ ಹೀಗೆ ಹಲವಾರು ವಿಚಾರಗಳು ವಿಚ್ಛೇದನದ ಮೂಲವಾಗುತ್ತಿವೆ. ಇದಕ್ಕೂ ಹೆಚ್ಚಾಗಿ ನೋವಿನ ಸಂಗತಿ ಏನೆಂದರೆ, ಕರ್ನಾಟಕದಲ್ಲೂ ಹೆಚ್ಚು ವಿಚ್ಛೇದನ ಪ್ರಕರಣಗಳು ವರದಿಯಾಗುತ್ತಿರುವುದು.
ಹೌದು! ಕರ್ನಾಟಕದಲ್ಲಿ ಶೇಕಡ 11.7 ರಷ್ಟು ವಿಚ್ಛೇದನದ ಪ್ರಕರಣಗಳು ಕಂಡು ಬರುತ್ತಿದ್ದು, ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. 2025 ರ ಜನವರಿಯಿಂದ ಮಾರ್ಚ್ ವರೆಗೆ ರಾಜ್ಯದಲ್ಲಿ 576 ವಿಚ್ಛೇದನ ಪ್ರಕರಣಗಳು ವರದಿಯಾಗಿವೆ. ಕಳೆದ ಐದು ವರ್ಷಗಳಿಂದ ಗಮನಿಸಿದರೆ ವಿಚ್ಛೇದನ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ.
2022 ರಲ್ಲಿ ಅತಿ ಹೆಚ್ಚು ಪ್ರಮಾಣದ ವಿಚ್ಛೇದನ ಪ್ರಕರಣಗಳು ದಾಖಲಾಗಿದೆ. 2023 ಹಾಗೂ 2024ರಲ್ಲಿ ಹೆಚ್ಚು ಕಡಿಮೆ ಅದೇ ಅಂಶ ಪುನರಾವರ್ತನೆಯಾಗಿದೆ. ಸಾಕಷ್ಟು ಕುಟುಂಬಗಳಲ್ಲಿ ಕೌಟುಂಬಿಕ ಕಲಹ ಹಾಗೂ ವಿವಾಹದಲ್ಲಿ ಪಾರದರ್ಶಕತೆ ಇಲ್ಲದಿರುವುದು, ದೈಹಿಕ ಸಂಪರ್ಕಕ್ಕೆ ಸಂಬಂಧಪಟ್ಟ ಸರಿಯಾದ ಅರಿವು ಇಲ್ಲದಿರುವುದು, ಪರಸ್ಪರ ಗೌರವ ಇಲ್ಲದೆ ಇರುವುದು ಅನೈತಿಕ ಸಂಬಂಧ, ಹೀಗೆ ಸಾಕಷ್ಟು ವಿಚಾರಗಳು ವಿಚ್ಛೇದನಕ್ಕೆ ಕಾರಣವಾಗಿವೆ.
ವಿಚ್ಛೇದನದ ದರ ಕಡಿಮೆ ಮಾಡುವ ಉದ್ದೇಶದಿಂದ ಸಾಕಷ್ಟು ದಂಪತಿಗಳಿಗೆ ಆಪ್ತ ಸಮಾಲೋಚನೆ ಹಾಗೂ ಕೌಟುಂಬಿಕ ಹಕ್ಕುಗಳನ್ನು ರಕ್ಷಿಸುವ ಸರಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದ ಪತಿ-ಪತ್ನಿಯರ ನಡುವೆ ಇರುವಂತಹ ವಿವಾದಗಳು ಹಾಗೂ ಇನ್ನಿತರ ಸಮಸ್ಯೆಗಳಿಗೆ ಒಂದು ಹಂತದ ಉತ್ತರ ಸಿಗುವಂತಹ ಸಾಧ್ಯತೆ ಇರುತ್ತದೆ. ಐದು ವರ್ಷಗಳಲ್ಲಿ ವಿಚ್ಛೇದನಕ್ಕೆ ಕೋರಿ ನ್ಯಾಯಾಲಯಕ್ಕೆ ಎರಡು ಲಕ್ಷ ದಂಪತಿಗಳು ಅರ್ಜಿ ಸಲ್ಲಿಸಿದ್ದಾರೆ.