ನವದೆಹಲಿ: ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಬಂಪರ್ ಉಡುಗೊರೆ ಘೋಷಿಸಿದೆ. ಅದರಲ್ಲೂ, ಸಂಬಳದಾರರು 75 ಲಕ್ಷ ರೂ. ಡಿಡಕ್ಷನ್ ಸೇರಿ 12.75 ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂಬ ವಿನಾಯಿತಿ ನೀಡಿದೆ. ಇದರಿಂದ ಒಬ್ಬ ವ್ಯಕ್ತಿಗೆ ತಿಂಗಳಿಗೆ 1 ಲಕ್ಷ ರೂ.ವರೆಗೆ ಸಂಬಳ ಪಡೆದರೂ ತೆರಿಗೆಯಿಂದ ವಿನಾಯಿತಿ ಪಡೆಯುತ್ತಾರೆ. ಅಷ್ಟೇ ಅಲ್ಲ, 13.7 ಲಕ್ಷ ರೂ.ವರೆಗೆ ಆದಾಯವಿದ್ದರೂ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಹೇಗೆ ಅಂತೀರಾ? ಮುಂದೆ ಓದಿ.
ಹೌದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿ ಎಸ್) ಯೋಜನೆ ಅನ್ವಯ 13.7 ಲಕ್ಷ ರೂ.ವರೆಗೆ ಸಂಬಳ ಇದ್ದರೂ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಎನ್ ಪಿ ಎಸ್ ಅನ್ವಯ 96 ಸಾವಿರ ರೂ.ವರೆಗೆ ತೆರಿಗೆ ಕಡಿತದಿಂದ ವಿನಾಯಿತಿ (ಡಿಡಕ್ಷನ್) ಪಡೆದುಕೊಳ್ಳಬಹುದಾದ ಕಾರಣ ಹೆಚ್ಚಿನ ಆದಾಯವಿದ್ದರೂ ತೆರಿಗೆ ಪಾವತಿಸಬೇಕಿಲ್ಲ. ಎನ್ ಪಿ ಎಸ್ ಕೊಡುಗೆ ಡಿಡಕ್ಷನ್ ಅನ್ನು ಕೇಂದ್ರ ಸರ್ಕಾರವು ಶೇ.10ರಿಂದ ಶೇ.14ಕ್ಕೆ ಏರಿಕೆ ಮಾಡಿದ ಕಾರಣ 96 ಸಾವಿರ ರೂ.ವರೆಗೆ ವಿನಾಯಿತಿ ಪಡೆಯಬಹುದಾಗಿದೆ.
ಉದಾಹರಣೆಗೆ ಉದ್ಯೋಗಿಯೊಬ್ಬರು ವರ್ಷಕ್ಕೆ 13.7 ಲಕ್ಷ ರೂ. ದುಡಿಯುತ್ತಿದ್ದರೆ, ಶೇ.50ರಷ್ಟು ಅಂದರೆ 6.85 ಲಕ್ಷ ರೂ. ಬೇಸಿಕ್ ಸ್ಯಾಲರಿ ಎಂದಾಗುತ್ತದೆ. ಹಾಗಾದಾಗ, ಎನ್ಪಿಎಸ್ ಗೆ ಸಂದಾಯವಾಗುವುದು ಶೇ.14ರಷ್ಟು, ಅಂದರೆ 95,900 ರೂಪಾಯಿ. ಆಗ ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂ. ಸೇರಿ ಒಟ್ಟು 13.7 ಲಕ್ಷ ರೂ.ಗಳಿಗೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.
ಎಲ್ಲ ಕಂಪನಿಗಳೂ ಆಯ್ಕೆ ಮಾಡಿಕೊಂಡಿರಲ್ಲ
ಎನ್ ಪಿ ಎಸ್ ಯೋಜನೆ ವಿಚಾರದಲ್ಲಿ ಒಂದು ತೊಡಕು ಇದೆ. ಎಲ್ಲ ಕಂಪನಿಗಳು ಕೂಡ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದಿಲ್ಲ. ಇದರಿಂದ ಎಲ್ಲ ಕಂಪನಿ ಉದ್ಯೋಗಿಗಳು ಸೌಕರ್ಯ ಸಿಗುವುದಿಲ್ಲ. ಇನ್ನು ಸುದೀರ್ಘ ಅವಧಿಯ ಲಾಕ್ ಇನ್ ಪೀರಿಯಡ್ ಇರುವ ಕಾರಣ ಬಹುತೇಕ ಉದ್ಯೋಗಿಗಳು ಎನ್ ಪಿ ಎಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ.