ಕರ್ನಾಟಕದ ಧರ್ಮಶ್ರೀ ರಿಲೀಫ್ ಫೌಂಡೇಶನ್ ಹಾಗೂ ಮಹಾರಾಷ್ಟ್ರ ಸಂಸ್ಥೆ ಆಶ್ರಯದಲ್ಲಿ ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ತಂಗುದಾಣವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಕೊಂಕಣ ರೈಲ್ವೆಯ ತರಬೇತಿ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ಶ್ರೀಧರ ಅವಭ್ರತ್ ಹಾಗೂ ಸೀನಿಯರ್ ರೀಜನಲ್ ಟ್ರಾಫಿಕ್ ಮ್ಯಾನೇಜರ್ ದೀಪಕ್ ಭಟ್ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ್ ಅವಭ್ರತ್, ಧರ್ಮಶ್ರೀ ಫೌಂಡೇಶನ್ ಸಂಸ್ಥೆಯು ಬೈಂದೂರು ವಲಯದಲ್ಲಿ ಹಲವಾರು ವರ್ಷಗಳಿಂದ ಜನ ಸೇವೆ ಮಾಡುತ್ತ ಬರುತ್ತಿದೆ. ಈಗ ನಮ್ಮ ರೈಲು ಇಲಾಖೆಗೆ ತಂಗುದಾಣವನ್ನು ಕೊಡುಗೆಯಾಗಿ ನೀಡಿದ್ದು ಬಹಳ ಸಂತೋಷ ನೀಡಿದೆ. ಈ ಸಂಸ್ಥೆಯಿಂದ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.

ಹಿರಿಯ ಅಧಿಕಾರಿ ದಿಲೀಪ್ ಡಿ ಭಟ್ ಮಾತನಾಡಿ, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ನಾಗರಾಜ್ ಸುವರ್ಣ ಅವರು ಸ್ವಂತ ಉದ್ಯಮದಿಂದ ಬಂದ ಆದಾಯದಲ್ಲಿ ಲಕ್ಷಾಂತರ ರೂ. ವ್ಯಯಿಸಿ ಈ ತಂಗುದಾಣ ನಿರ್ಮಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ. ಇದೊಂದು ಸಂತಸದ ವಿಚಾರ ಎಂದರು.
ಸಂಸ್ಥೆಯ ಸಂಸ್ಥಾಪಕ ನಾಗರಾಜ್ ಆರ್. ಸುವರ್ಣ ಮಾತನಾಡಿ, ನನ್ನ ಹುಟ್ಟೂರಿಗೆ ಏನಾದರೂ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಮಾಡಲಾಗಿದೆ. ಈಗಾಗಲೇ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಈ ತಂಗುದಾಣ ನಿರ್ಮಿಸಲಾಗಿದೆ. ಇದರ ಸದುಪಯೋಗವಾಗಲಿ ಎಂದು ಹೇಳಿದರು.
ಕಾರ್ಯದರ್ಶಿ ಗಣೇಶ್ ಮಟ್ನಕಟ್ಟೆ, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ್ ಆರ್ ಸುವರ್ಣ, ಟ್ರಸ್ಟಿಗಳಾದ ನಿರ್ಮಲ ಸುವರ್ಣ,ರಾಘವೇಂದ್ರ ಪೂಜಾರಿ, ರೂಪೇಶ್ ಪೂಜಾರಿ, ಸುಶೀಲ ಸುವರ್ಣ, ವಿಶ್ವನಾಥ್ ಪೂಜಾರಿ, ಮಹೇಶ್ ಪೂಜಾರಿ ಸೇರಿದಂತೆ ಹಲವರು ಇದ್ದರು.