ಲಿವ್-ಇನ್ ಸಂಬಂಧದಲ್ಲಿರುವ ಜೋಡಿಗಳೇ ಎಚ್ಚರ, ಆದಷ್ಟು ಬೇಗ ನಿಮ್ಮ ಸಹ-ಜೀವನ ಸಂಬಂಧವನ್ನು ನೋಂದಾಯಿಸಿಕೊಳ್ಳಿ. ಇಲ್ಲದಿದ್ದರೆ 6 ತಿಂಗಳು ಕಂಬಿ ಎಣಿಸಬೇಕಾಗುತ್ತದೆ ಅಥವಾ 25 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ!
ಇಂಥದ್ದೊಂದು ನಿಯಮ ಉತ್ತರಾಖಂಡದಲ್ಲಿ ಜಾರಿಗೆ ಬಂದಿದೆ. ದೇಶದಲ್ಲೇ ಮೊದಲ ಬಾರಿಗೆ ಸಮಾನ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ತಂದಿರುವ ಉತ್ತರಾಖಂಡದಲ್ಲಿ, ಲಿವ್-ಇನ್ ಸಂಬಂಧದಲ್ಲಿರುವ ಜೋಡಿಗಳು ಸರ್ಕಾರದ ಪ್ರಕಟಣೆ ಹೊರಬಿದ್ದ 30 ದಿನಗಳ ಒಳಗಾಗಿ ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ತಪ್ಪಿದಲ್ಲಿ 6 ತಿಂಗಳವರೆಗೆ ಜೈಲುಶಿಕ್ಷೆ ಅಥವಾ 25,000 ರೂ. ದಂಡ ತೆರಬೇಕಾಗುತ್ತದೆ.
ಅಷ್ಟೇ ಅಲ್ಲ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವ ಜೋಡಿಗೆ ಮನೆ ಕೊಟ್ಟಿರುವಂತಹ ಮನೆ ಮಾಲೀಕರು ತಮ್ಮ ಬಾಡಿಗೆದಾರರ ಲಿವ್-ಇನ್ ನೋಂದಣಿ ಪ್ರಮಾಣಪತ್ರವನ್ನು ಪರಿಶೀಲಿಸಿಯೇ ಬಾಡಿಗೆ ಕರಾರು ಒಪ್ಪಂದ ಮಾಡಿಕೊಳ್ಳಬೇಕು ಎಂದು ಹೊಸ ಕಾನೂನು ಹೇಳಿದೆ. ಈ ನಿಯಮವನ್ನು ಮನೆ ಮಾಲೀಕರು ಉಲ್ಲಂಘಿಸಿದರೆ ಅವರಿಗೂ 20,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಲಿವ್-ಇನ್ ಸಂಬಂಧ ಹೊಂದುವ ಜೋಡಿಯು ತಾವು ಸಹ ಜೀವನ ನಡೆಸುತ್ತಿರುವುದಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ಸಂಬಂಧ ಮುರಿದು ಬಿದ್ದೊಡನೆ ಅದನ್ನೂ ಪೊಲೀಸರ ಗಮನಕ್ಕೆ ತರಬೇಕು ಎಂದೂ ಕಾನೂನು ಹೇಳಿದೆ.

ಸಂಬಂಧದ ನೋಂದಣಿ ಶುಲ್ಕ ಎಷ್ಟು?
ಉತ್ತರಾಖಂಡದಲ್ಲಿ ಲಿವ್-ಇನ್ ದಂಪತಿಗಳು ನೋಂದಣಿಗೆ 500 ರೂಪಾಯಿ ಶುಲ್ಕ ಪಾವತಿಸಬೇಕು. ಲಿವ್ ಇನ್ ಸಂಬಂಧ ಹೊಂದಿದ 1 ತಿಂಗಳೊಳಗಾಗಿ ನೋಂದಣಿ ಮಾಡದಿದ್ದರೆ, ಹೆಚ್ಚುವರಿಯಾಗಿ 1,000 ರೂ. ದಂಡ ತೆರಬೇಕಾಗುತ್ತದೆ.
ಇದಲ್ಲದೇ ಸಮಾನ ನಾಗರಿಕ ಸಂಹಿತೆಯು ಬಹುಪತ್ನಿತ್ವಕ್ಕೂ (Polygamy) ನಿಷೇಧ ಹೇರಿದೆ. ಪುರುಷರು ಹಾಗೂ ಮಹಿಳೆಯರ ವಿವಾಹ ಯೋಗ್ಯ ವಯಸ್ಸನ್ನು 21 ವರ್ಷ ಎಂಬುದಾಗಿ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರವು ವಿವಾಹ, ವಿಚ್ಛೇದನ (Divorce), ಲಿವ್-ಇನ್ ಸಂಬಂಧ ಹಾಗೂ ಉಯಿಲು ಪತ್ರ (Will) ನೋಂದಣಿ ಸುಗಮಗೊಳಿಸಲು ಹೊಸ ಆನ್‌ಲೈನ್ ಪೋರ್ಟಲ್ ಅನ್ನೂ ಪ್ರಾರಂಭಿಸಿದೆ. ಈಗಾಗಲೇ ಈ ಪೋರ್ಟಲ್ ಮೂಲಕ ವಿವಾಹ ನೋಂದಣಿ ಆರಂಭವಾಗಿವೆ.