ಪಾಟ್ನಾ: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿದರೆ 10 ಲಕ್ಷ ರೂಪಾಯಿ ಹಣ ನೀಡಲಾಗುವುದು ಎಂಬ ಆಮಿಷವನ್ನೊಡ್ಡಿ ಅಮಾಯಕ ಪುರುಷರನ್ನು ಬಲೆಗೆ ಬೀಳಿಸಿ ವಂಚಿಸುತ್ತಿದ್ದ ಬೃಹತ್ ಸೈಬರ್ ಜಾಲವೊಂದನ್ನು ಬಿಹಾರದ ನವಾಡಾ ಪೊಲೀಸರು ಭೇದಿಸಿದ್ದಾರೆ. ಈ ವಿಚಿತ್ರ ವಂಚನೆಯ ಜಾಲವು ‘ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿತ್ತು. ಈ ಸಂಬಂಧ ನವಾಡಾ ಸೈಬರ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.
ಸೈಬರ್ ಲೋಕದಲ್ಲಿ ‘ಪ್ರೆಗ್ನೆಂಟ್ ಜಾಬ್’ ಹಾವಳಿ
ಬಂಧಿತ ವಂಚಕರು ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ನೀಡುತ್ತಿದ್ದರು. “ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್” ಮತ್ತು “ಪ್ಲೇಬಾಯ್ ಸರ್ವಿಸ್” ಎಂಬ ಹೆಸರಿನಲ್ಲಿ ಈ ಜಾಹೀರಾತುಗಳನ್ನು ಹರಿಬಿಡಲಾಗುತ್ತಿತ್ತು. ಹಣದ ಜೊತೆಗೆ ಉಚಿತ ಲೈಂಗಿಕ ಸಂಪರ್ಕದ ಆಮಿಷವನ್ನೂ ನೀಡಲಾಗುತ್ತಿತ್ತು. ಇದರೊಂದಿಗೆ ‘ಧನಿ ಫೈನಾನ್ಸ್’ ಮತ್ತು ‘ಎಸ್‌ಬಿಐ ಅಗ್ಗದ ಸಾಲ’ ಎಂಬ ಹೆಸರಿನಲ್ಲಿಯೂ ನಕಲಿ ಜಾಹೀರಾತುಗಳನ್ನು ಸೃಷ್ಟಿಸಿ ಜನರನ್ನು ಸೆಳೆಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಯ ಜಾಲಕ್ಕೆ ಪುರುಷರು ಬೀಳುತ್ತಿದ್ದುದು ಹೇಗೆ?
ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯಾಗಿಸಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು, ಒಂದು ವೇಳೆ ವಿಫಲರಾದರೂ ಸಮಾಧಾನಕರ ಬಹುಮಾನವಾಗಿ 5 ಲಕ್ಷ ರೂಪಾಯಿ ನೀಡಲಾಗುವುದು ಎಂಬುದು ವಂಚಕರ ಪ್ರಮುಖ ಆಕರ್ಷಣೆಯಾಗಿತ್ತು. ಈ ಜಾಲಕ್ಕೆ ಸಿಲುಕುವ ಪುರುಷರಿಗೆ ಮಹಿಳಾ ಮಾಡೆಲ್‌ಗಳ ಫೋಟೋಗಳನ್ನು ಕಳುಹಿಸಿ ಅವರನ್ನು ನಂಬಿಸಲಾಗುತ್ತಿತ್ತು. ಒಮ್ಮೆ ವ್ಯಕ್ತಿ ಈ ಆಮಿಷಕ್ಕೆ ಒಳಗಾದ ಮೇಲೆ, ಅವರಿಂದ ‘ನೋಂದಣಿ ಶುಲ್ಕ’, ‘ಹೋಟೆಲ್ ಬುಕ್ಕಿಂಗ್ ವೆಚ್ಚ’ ಹಾಗೂ ಇತರ ‘ಪ್ರಾರಂಭಿಕ ಶುಲ್ಕ’ಗಳ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿತ್ತು. ಹಣ ನೀಡಿದ ನಂತರವೂ ವಂಚಕರು ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಿದ್ದರು, ಕೊನೆಗೆ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ಸಂತ್ರಸ್ತರಿಗೆ ಅರಿವಾಗುವಷ್ಟರಲ್ಲಿ ಅವರು ಸಾಕಷ್ಟು ಹಣ ಕಳೆದುಕೊಂಡಾಗಿರುತ್ತಿತ್ತು.
ಸಾಮಾಜಿಕ ಮುಜುಗರದ ಲಾಭ ಪಡೆದ ವಂಚಕರು
ಈ ಪ್ರಕರಣದಲ್ಲಿ ವಂಚನೆಗೆ ಒಳಗಾದ ಬಹುತೇಕ ಪುರುಷರು ಪೊಲೀಸರಿಗೆ ದೂರು ನೀಡಲು ಹಿಂಜರಿಯುತ್ತಿದ್ದರು. ಈ ರೀತಿಯ ಕೆಲಸಕ್ಕೆ ಮುಂದಾದ ವಿಷಯ ಸಮಾಜಕ್ಕೆ ತಿಳಿದರೆ ಮಾನಹಾನಿಯಾಗುತ್ತದೆ ಎಂಬ ಭಯವೇ ವಂಚಕರಿಗೆ ಶ್ರೀರಕ್ಷೆಯಾಗಿತ್ತು. ಅನೇಕರು ತಮ್ಮ ಉಳಿತಾಯದ ಹಣವನ್ನೆಲ್ಲಾ ಕಳೆದುಕೊಂಡಿದ್ದರೂ, ಮರ್ಯಾದೆಗೆ ಅಂಜಿ ಮೌನಕ್ಕೆ ಶರಣಾಗಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಈ ಗ್ಯಾಂಗ್, ಯಾವುದೇ ಅಳುಕಿಲ್ಲದೆ ದೀರ್ಘಕಾಲದಿಂದ ಈ ದಂಧೆ ನಡೆಸುತ್ತಿತ್ತು.
ಸೈಬರ್ ಪೊಲೀಸರ ಕಾರ್ಯಾಚರಣೆ
ನವಾಡಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧಿಮಾನ್ ನೇತೃತ್ವದ ವಿಶೇಷ ತನಿಖಾ ತಂಡವು (SIT) ಈ ಜಾಲದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಪ್ರಮುಖ ಆರೋಪಿ ರಂಜನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ವಂಚನೆಗೆ ಬಳಸುತ್ತಿದ್ದ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನವಾಡಾ ಜಿಲ್ಲೆಯಲ್ಲಿ ಇಂತಹ ಸೈಬರ್ ವಂಚನೆಗಳು ಈ ಹಿಂದೆಯೂ ವರದಿಯಾಗಿದ್ದು, ಹಲವರನ್ನು ಬಂಧಿಸಲಾಗಿದ್ದರೂ ಈ ದಂಧೆ ಮಾತ್ರ ನಿಂತಿಲ್ಲ ಎಂಬುದು ಪೊಲೀಸ್ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಅಸಹಜ ಮತ್ತು ಆಮಿಷದ ಜಾಹೀರಾತುಗಳನ್ನು ನಂಬಬೇಡಿ ಎಂದು ನವಾಡಾ ಸೈಬರ್ ಪೊಲೀಸ್ ಠಾಣೆಯ ಉಸ್ತುವಾರಿ ನಿಶು ಮಲ್ಲಿಕ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಹೂಡಿಕೆ, ಕೆಲಸ ಅಥವಾ ಸಾಲದ ಹೆಸರಿನಲ್ಲಿ ಯಾರಾದರೂ ಮುಂಗಡ ಹಣ ಕೇಳಿದರೆ ಅದು ವಂಚನೆ ಎಂಬುದು ದೃಢ. ಅಂತಹ ಯಾವುದೇ ಶಂಕಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡುವಂತೆ ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: ಬಿಲ್ಡರ್‌ಗೆ ಹನಿಟ್ರ್ಯಾಪ್ | ಬೆತ್ತಲೆ ವಿಡಿಯೋ ಇಟ್ಟುಕೊಂಡು 10 ಕೋಟಿ ರೂ. ಸುಲಿಗೆಗೆ ಯತ್ನಿಸಿದ ಮಹಿಳೆ, ಪತ್ರಕರ್ತ ಸೆರೆ



















