ಬೆಂಗಳೂರು: ಅಸ್ಥಿಗಳು ದೊರಕಿದ ತಕ್ಷಣ ಈ ಅಸ್ಥಿಯ ಅವಶೇಷ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಹೇಳಬಹುದೇ ಹೊರತು ಮೃತ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆಯಾ? ಇಲ್ಲವೆ ? ಎಂದು ಹೇಳಲು ಆಗುವುದಿಲ್ಲ ಎಂದು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಪ್ರೊ. ಅರುಣ್ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ದೊರಕಿರುವ ಅಸ್ಥಿಗಳ ವಿಚಾರಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ಮೈಸೂರು ಪ್ರೊ. ಅರುಣ್ ಈ ಬಗ್ಗೆ ಕೆಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ.
ಇದು ಕೊಲೆಯೋ ಅಥವಾ ಸಹಜ ಸಾವೇ ? ಎಂದು ಹೇಳುವುದಕ್ಕೆ ಒಂದೆರಡು ಅಸ್ಥಿಗಳಿಂದ ಸಾಧ್ಯವಿಲ್ಲ. ವಯಸ್ಸು ಕೂಡ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.
ನಮಗೆ ಪೂರ್ಣ ಸ್ಕೆಲಿಟನ್ ದೊರಕಿದರೆ ಶೇ.100ರಷ್ಟು ಖಚಿತ ಮಾಹಿತಿ ದೊರಕುತ್ತದೆ. ತೊಡೆ ಮೂಳೆ ಸಿಕ್ಕರೆ ಶೇ.80ರಷ್ಟು, ಸೊಂಟದ ಮೂಳೆ ದೊರಕಿದರೆ ಶೇ. 95ರಷ್ಟು ನಿಖರ ಮಾಹಿತಿ ಹೇಳಬಹುದು. ಈಗ ಧರ್ಮಸ್ಥಳದಲ್ಲಿ ದೊರಕುವ ಅಸ್ಥಿಗಳು ಮೊದಲು ಮನುಷ್ಯನದ್ದಾ ಅಥವಾ ಪ್ರಾಣಿಯದ್ದಾ ಅಂತ ತಿಳಿದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
10-15 ವರ್ಷಗಳಲ್ಲಿ ಅಸ್ಥಿಗಳು ಮಣ್ಣಿನಲ್ಲಿ ಕರಗುತ್ತವೆ:
ಅಲ್ಲದೇ 10- 15 ವರ್ಷಗಳಲ್ಲಿ ಮನುಷ್ಯನ ಮೂಳೆಗಳು ಮಣ್ಣಿನಲ್ಲಿ ಬಹುತೇಕ ಕರಗುತ್ತವೆ. ಕೆಲ ಭಾಗದ ಮೂಳೆಗಳು ಅಷ್ಟೇ ಸಿಗಬಹುದು. ತಲೆ ಬುರುಡೆಯೂ ಸಂಪೂರ್ಣವಾಗಿ ಇರಲು ಸಾಧ್ಯವಿಲ್ಲ ಎಂದು ವಿಧಿ ವಿಜ್ಞಾನದ ಪ್ರೊ. ಅರವಿಂದ್ ಹೇಳಿದ್ದಾರೆ.