ಬೆಂಗಳೂರು : ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲವು ಮಹತ್ವದ ಆದೇಶ ಹೊರಡಿಸಿದೆ. ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕ, ಆಡಳಿತಾತ್ಮಕ ಮತ್ತು ಸರ್ಕಾರಿ ಕಾರ್ಯಕ್ರಮಗಳ ಆಯೋಜನೆ ವೇಳೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ಶಾಲಾ ಕಾಲೇಜುಗಳು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ.

ಮಾರ್ಗಸೂಚಿಗಳು ಏನೇನು?
- ಧ್ವಜಾರೋಹಣ ವೇಳೆ ವಿದ್ಯುತ್ ತಂತಿ ಹಾದುಹೋಗದಂತೆ ಕ್ರಮಕೈಗೊಳ್ಳುವುದು. ಧ್ವಜ ಏರಿಸುವಾಗ, ಇಳಿಸುವಾಗ ಮಕ್ಕಳನ್ನು ಬಳಸಿಕೊಳ್ಳಬಾರದು. ಧ್ವಜಾರೋಹಣ ವೇಳೆ ಅನಿರೀಕ್ಷಿತವಾಗಿ ಬಾವುಟ ಸಿಕ್ಕಿಹಾಕಿಕೊಂಡರೆ ಧ್ವಜಸ್ತಂಭಕ್ಕೆ ಮಕ್ಕಳನ್ನು ಹತ್ತಿಸಬಾರದು.
- ಮಕ್ಕಳ ಕವಾಯತು ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ, ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸುವುದು.
- ಮಕ್ಕಳನ್ನು ಕಾರ್ಯಕ್ರಮ, ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವ ಮತ್ತು ಹಿಂದಿರುಗಿ ಕರೆತರುವ ವಾಹನಗಳ ಬಗ್ಗೆ ಪರಿಶೀಲಿಸಬೇಕು.
- ವಾಹನ ಚಾಲಕರು ವೇಗಮಿತಿಯಲ್ಲಿ ಚಲಿಸುವಂತೆ ಸೂಚನೆ ನೀಡುವುದು. ಪ್ರಮುಖವಾಗಿ ಚಾಲಕರು ಮದ್ಯಪಾನ ಮಾಡಿರದ ಬಗ್ಗೆ ಖಚಿತಪಡಿಸಿಕೊಳ್ಳುವುದು ಮತ್ತು ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕರೆದುಕೊಂಡು ಹೋಗಬಾರದು.
- ಕಾರ್ಯಕ್ರಮ ನಡೆಸುವ ಸ್ಥಳಗಳಲ್ಲಿ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
- ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಪರ್ಕಕ್ಕೆ ಬಾರದಂತೆ ವಿದ್ಯುತ್ ತಂತಿಗಳನ್ನು ಅಳವಡಿಸಲು ತಂತ್ರಜ್ಞರಿಗೆ ಸೂಚಿಸುವುದು.
- ವಿದ್ಯುತ್ ತಂತಿಗಳು ಇರುವಲ್ಲಿ ಮಳೆ ನೀರು ಸೋರದಂತೆ ಮತ್ತು ಇತರೆ ಯಾವುದೇ ಮೂಲದಿಂದ ನೀರು ಹರಿಯದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
- ಮಕ್ಕಳಿಗೆ ನೀಡುವ ನೀರು, ಪಾನೀಯ, ಆಹಾರದ ಶುಚಿತ್ವದ ಬಗ್ಗೆ ಪರಿಶೀಲಿಸುವುದು. ಆಹಾರ ತಯಾರಿಸುವ ಸ್ಥಳಗಳಿಗೆ ಮಕ್ಕಳ ಪ್ರವೇಶವನ್ನು ನಿರ್ಬಂಧಿಸುವುದು.
- ಗ್ಯಾಸ್ ಹಾಗೂ ಒಲೆಗಳು ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸಿ ನಿಗಾವಹಿಸುವುದು. ಯಾವುದೇ ರೀತಿ ಬೆಂಕಿ ಅವಘಡವಾಗದಂತೆ ಕ್ರಮವಹಿಸುವುದು.
- ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಮರ್ಪಕವಾಗಿ ವಾಹನ ನಿಲುಗಡೆ ಮಾಡಲು ಸೂಚನಾ ಫಲಕಗಳನ್ನು ಅಳವಡಿಸುವುದು. ಕಾರ್ಯಕ್ರಮದ ಸ್ಥಳದಿಂದ ಕನಿಷ್ಟು 100 ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವುದು.
- ಅನಿರೀಕ್ಷಿತವಾಗಿ ಸಂಭವಿಸಬಹುದಾದ ಸನ್ನಿವೇಶಗಳನ್ನು ಎದುರಿಸುವ ಕುರಿತು ಮಕ್ಕಳಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡುವುದು.
- ಸ್ಥಳೀಯ ಆಡಳಿತಗಳು ಮಕ್ಕಳ ಸುರಕ್ಷತೆ ಕುರಿತು ಗಮನ ಹರಿಸುವುದು. ಎಲ್ಲಾ ಕಾರ್ಯಕ್ರಮಗಳ ಆಯೋಜಕರು, ಸ್ಥಳೀಯ ಪೊಲೀಸ್, ವೈದ್ಯಕೀಯ ವ್ಯವಸ್ಥೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಆಡಳಿತಕ್ಕೆ ಮಕ್ಕಳ ಕಾರ್ಯಕ್ರಮದ ಕುರಿತು ಕಡ್ಡಾಯವಾಗಿ ಮಾಹಿತಿ ಒದಗಿಸುವುದು. ಯಾವುದೇ ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಲು ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ತಿಳಿಸುವುದು.
ಇದನ್ನೂ ಓದಿ: ಚಿಕ್ಕಮಗಳೂರಿನ ಯುವಕನಿಗೆ ಜೋಡಿಯಾದ ಚೀನಾ ಚೆಲುವೆ! ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದ ಮದುವೆ ಸಂಭ್ರಮ



















