ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಕಳೆದುಕೊಂಡವರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಕುರಿತು ಸಿಹಿ ಸುದ್ದಿ ನೀಡಿದ್ದಾರೆ. ಎಲ್ಲ ಠೇವಣಿದಾರರಿಗೆ ಶುಭ ಸುದ್ದಿ ಸಿಕ್ಕಿದ್ದು, ರಂಜಾನ್ ಹಬ್ಬದ ಒಳಗಾಗಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಯಿತು. ಆನಂತರ ಸಚಿವರು ಮಾತನಾಡಿದರು.
ಸಚಿವ ಜಮೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸಭೆಯಲ್ಲಿ ಭಾಗಿಯಾಗಿದ್ದರು. ಐಎಂಎ ಹಗರಣದಲ್ಲಿ ಎಷ್ಟು ಮೊತ್ತದ ಹಗರಣ ನಡೆದಿದೆ, ಇಲ್ಲಿಯವರೆಗೆ ಎಷ್ಟು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣ ನಡೆದು 7 ವರ್ಷಗಳೇ ಕಳೆದಿವೆ. ಇಲ್ಲಿಯವರೆಗೆ ಯಾರಿಗೆ ಎಷ್ಟು ಹಣ ಹಿಂದಿರುಗಿಸಲಾಗಿದೆ ಎಂಬೆಲ್ಲ ಕುರಿತು ಚರ್ಚೆ ನಡೆಸಿದ್ದಾರೆ.
ಐಎಂಎನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದವರಿಗೆ, ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ಕೊಡಲಾಗುವುದು. ಫಲಾನುಭವಿಗಳು ಮೃತಪಟ್ಟಿದ್ದರೆ ಅವರ ನಾಮಿನಿಗೆ ಪರಿಹಾರ ನೀಡಲಾಗುವುದು. ರಂಜಾನ್ ಹಬ್ಬಕ್ಕೂ 10 ದಿನ ಮೊದಲೇ ಪರಿಹಾರ ಸಿಗಲಿದೆ ಎಂದು ಸಚಿವರು ಈ ವೇಳೆ ಹೇಳಿದ್ದಾರೆ.
ಹಣ ಡಬ್ಲಿಂಗ್ ಆಸೆಯಿಂದಾಗಿ ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರು 3,213.58 ಕೋಟಿ ರೂ. ಹಣವನ್ನು ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದರು. 69 ಸಾವಿರ ಠೇವಣಿದಾರರಿಗೆ ಹಣ ಮರಳಿ ನೀಡಬೇಕಿದೆ. ಈಗಾಗಲೇ ಸರ್ಕಾರ ಐಎಂಎ ಕಂಪನಿಗೆ ಸಂಬಂಧಿಸಿದ 106.92 ಕೋಟಿ ಮೌಲ್ಯದ ಚರಾಸ್ತಿ, 401.92 ಕೋಟಿ ಮೌಲ್ಯ ಸ್ಥಿರಾಸ್ತಿ ವಶಕ್ಕೆ ಪಡೆದುಕೊಂಡಿತ್ತು. ಕಂಪನಿಯ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂ. ನಗದು ಸೇರಿದಂತೆ 534.5 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈಗ ಕೋರ್ಟ್ ಆದೇಶದಂತೆ ಆಸ್ತಿ ಹರಾಜು ಹಾಕಿ ಹಣ ಕಳೆದುಕೊಂಡವರಿಗೆ ಹಣ ಹಿಂದಿರುಗಿಸಲಾಗುತ್ತಿದೆ.