ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಗುಂಪು ಹಂತದ ಪಂದ್ಯಕ್ಕೆ ಮುನ್ನ ತಂಡದ ಮನೋಭಾವ ಮತ್ತು ತಯಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾರತವು ಈಗಾಗಲೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ತಲುಪಿರುವುದರಿಂದ, ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಅನೌಪಚಾರಿಕ ಎನಿಸಿದೆ. ತಂಡ ಹಿಂದಿನ ಪ್ರದರ್ಶನದ ಬಗ್ಗೆ ಯೋಚಿಸದೆ ಆ ಕ್ಷಣದ ಹೋರಾಟಕ್ಕೆ ಪ್ರಾಮುಖ್ಯತೆ ನೀಡಲಿದೆ ಎಂದು ರಾಹುಲ್ ತಿಳಿಸಿದ್ದಾರೆ.
ರಾಹುಲ್ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ನಾಕೌಟ್ ಹಂತಕ್ಕೆ ತಲುಪಲು ವಿಫಲವಾದ ಕಠಿಣ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ಅದರಿಂದ ತಂಡ ಪಾಠ ಕಲಿತಿದೆ. ಅಲ್ಲದೆ, ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
”ಸೆಮಿಫೈನಲ್‌ಗೆ ತಲುಪಲು ವಿಫಲರಾಗಿದ್ದು ನಮ್ಮ ಆಟಗಾರರಿಗೆ ಹಿತಕರ ಅನುಭವವಾಗಿರಲಿಲ್ಲ. ಅದರಿಂದ ನಾವು ಪಾಠ ಕಲಿತಿದ್ದೇವೆ ಮತ್ತು ಕಳೆದ 2-3 ಐಸಿಸಿ ಟೂರ್ನಿಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ,” ಎಂದು ರಾಹುಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
”ಈಗ ನಾವು ಹಿಂದಿನ ಗೆಲುವು ಅಥವಾ ಸೋಲುಗಳ ಬಗ್ಗೆ ಯೋಚಿಸುತ್ತಿಲ್ಲ. ವಾಸ್ತವಕ್ಕೆ ಒತ್ತು ನೀಡುವುದೇ ಮುಖ್ಯ. ತಂಡದ ಎಲ್ಲರೂ ಸಮತೋಲನದಿಂದ, ಶಾಂತ ಮನಸ್ಥಿತಿಯಲ್ಲಿದ್ದಾರೆ. ನಾವು ಪ್ರತಿ ಹೆಜ್ಜೆಯಲ್ಲೂ ಮುನ್ನಡೆಯುತ್ತೇವೆ. ಸೆಮಿಫೈನಲ್ ಬಗ್ಗೆ ಈಗಲೇ ಯೋಚಿಸುತ್ತಿಲ್ಲ,” ಎಂದು ಅವರು ಹೇಳಿದರು.
ಪಂತ್ ಜತೆ ಸ್ಪರ್ಧೆ ಇಲ್ಲ
ರಿಷಭ್ ಪಂತ್ ಹಾಗೂ ತಮ್ಮ ನಡುವೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸ್ಥಾನಕ್ಕಾಗಿ ಸ್ಪರ್ಧೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ರಾಹುಲ್ ಉತ್ತರಿಸಿದರು. “ತಂಡ, ನಾಯಕ ಅಥವಾ ಕೋಚ್ ರಿಷಭ್‌ನ್ನು ಆಯ್ಕೆ ಮಾಡುವ ಆಕಾಂಕ್ಷೆ ಇಡಬಹುದು. ಆದರೆ ನಾನು ರಿಷಭ್ ಜೊತೆ ಸ್ಪರ್ಧೆ ಮಾಡುವುದಿಲ್ಲ . ನನಗೆ ಸರಿಹೊಂದುವ ಆಟವನ್ನು ಆಡಲು ಮತ್ತು ನನ್ನ ಶೈಲಿಗೆ ಬದ್ಧನಾಗಲು ಪ್ರಯತ್ನಿಸುತ್ತೇನೆ ಎಂದು ರಾಹುಲ್ ತಿಳಿಸಿದರು.
ಸ್ಟ್ರೈಕ್ ರೇಟ್ ಬಗ್ಗೆ ಉತ್ತರ
ಕೆ.ಎಲ್. ರಾಹುಲ್ ತಮ್ಮ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಕುರಿತು ಬರುತ್ತಿರುವ ಟೀಕೆಗಳಿಗೆ ಉತ್ತರಿಸಿದ್ದಾರೆ. ಈ ಬಗ್ಗೆ ನಾನು ಓದಿರುವೆ, ಕೇಳಿರುವೆ. ಆದರೆ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಟೀಕೆಗಳು ಅರ್ಥಪೂರ್ಣವೇ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಮೈದಾನಕ್ಕಿಳಿದಾಗ ನಾನು ನನ್ನ ಸ್ಟ್ರೈಕ್ ರೇಟ್ ಏರಿಸಬೇಕೆಂದು ಯೋಚಿಸುವುದಿಲ್ಲ,” ಎಂದು ಅವರು ಹೇಳಿದರು.
ನಾನು ತಂಡ ದ ಗೆಲುವಿಗೆ ಮತ್ತು ಆ ಕ್ಷಣಕ್ಕೆ ಸೂಕ್ತವಾದ ಆಟ ಆಡುವುದಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ಪ್ರತಿಯೊಮ್ಮೆ ನಾನು ಶೇ.100 ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಆದರೆ ತಂಡದ ಪಾಲಿಗೆ ಒಳಿತಾಗುವಂತೆ ಆಟವಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.