ಶಿವಮೊಗ್ಗ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಆರೋಪದಡಿ ನಿರ್ಮಾಣದ ಹಂತದಲ್ಲಿದ್ದ ಮನೆಯನ್ನು ತಾಲೂಕು ಆಡಳಿತ ತೆರವುಗೊಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಅಗಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪೊಲೀಸ್ ಬಂದೋಬಸ್ತ್ ನಲ್ಲಿ ಜೆಸಿಬಿ ಯಂತ್ರ ಬಳಸಿ ತಾಲೂಕು ಕಚೇರಿಯ ಸಿಬ್ಬಂದಿ ಮನೆ ತೆರವು ಗೊಳಿಸಿದರು. ಈ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಸಮಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ರವಿಚಂದ್ರ ಎಂಬ ವಕೀಲರು ಅಕ್ರಮವಾಗಿ ಮನೆ ನಿರ್ಮಿಸಿದ್ದರು ಎಂಬ ಆರೋಪವಿತ್ತು. ಸರ್ವೇ ನಂಬರ್ 20ರಲ್ಲಿ ನಿರ್ಮಾಣವಾಗಿತ್ತು. ಮನೆಯ ಹಕ್ಕು ಪತ್ರ, ಚೆಕ್ ಬಂದಿ ಸೇರಿದಂತೆ ಸೂಕ್ತ ದಾಖಲೆಗಳಿದ್ದರೂ ಕೂಡ, ಯಾವುದೇ ನೋಟಿಸ್ ನೀಡದೆ ಮನೆ ಕೆಡವಲಾಗಿದೆ ಎಂದು ವಕೀಲ ರವಿಚಂದ್ರ ಆರೋಪಿಸಿದ್ದಾರೆ.
ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ಮನೆ ತೆರವಾಗದ ಕಾರಣ ತಾಲೂಕು ಆಡಳಿತದಿಂದಲೇ ಮನೆ ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
ವಕೀಲ ರವಿಚಂದ್ರ ತಾಲೂಕು ಆಡಳಿತದ ಈ ಕ್ರಮದ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.



















