ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದೆ. 2024-25ನೇ ಸಾಲಿನ ಹಣಕಾಸು ವರ್ಷಕ್ಕೆ ಇಎಂಇ (EME) ಕಾರ್ಪ್ಸ್ ನ ಅರ್ಹ ರಕ್ಷಣಾ ನಾಗರಿಕ ಉದ್ಯೋಗಿಗಳಿಗೆ 22 ದಿನಗಳ ವೇತನಕ್ಕೆ ಸಮನಾದ ಕಾರ್ಯಕ್ಷಮತೆ ಆಧಾರಿತ ಬೋನಸ್ (ಪಿಎಲ್ ಬಿ) ಘೋಷಣೆ ಮಾಡಿದೆ. ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ಉದ್ಯೋಗಿಗಳಿಗೆ ಬೋನಸ್ ಲಭ್ಯವಾಗಲಿದೆ.
ಬೋನಸ್ ಲೆಕ್ಕಾಚಾರ ಮಾಡಲು ಮಾಸಿಕ ವೇತನದ ಗರಿಷ್ಠ ಮಿತಿಯನ್ನು ರೂ. 7,000 ಎಂದು ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ಇರುವ ಸೂತ್ರದ (Formula) ಆಧಾರದ ಮೇಲೆ 22 ದಿನಗಳ ವೇತನವನ್ನು ಲೆಕ್ಕ ಹಾಕಿ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಹಿಂದೆ ಇದ್ದ ಇತರೆ ನಿಯಮಗಳು ಮತ್ತು ಷರತ್ತುಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರಿ ನೌಕರರಿಗೆ ಬೋನಸ್ ಪಾವತಿಗಾಗಿ ತಗಲುವ ವೆಚ್ಚವನ್ನು 2025–26ನೇ ಸಾಲಿನ ಆರ್ಥಿಕ ವರ್ಷದ ರಕ್ಷಣಾ ಸೇವೆಗಳ ಅಂದಾಜು ಪಟ್ಟಿಯ (Defence Services Estimates) ಬಜೆಟ್ ನಿಂದಲೇ ಭರಿಸಲಾಗುತ್ತದೆ. ಇದಕ್ಕಾಗಿ ಸರ್ಕಾರವು ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೊರಿಸದೆ, ಈಗಾಗಲೇ ಹಂಚಿಕೆ ಮಾಡಲಾದ ಬಜೆಟ್ ನಿಂದಲೇ ನಿಧಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಸಾಮಾನ್ಯವಾಗಿ ಸರ್ಕಾರವು ದೀಪಾವಳಿ ಸಮಯದಲ್ಲಿಯೇ ರೈಲ್ವೆ, ಅಂಚೆ ಮುಂತಾದ ಇಲಾಖೆಗಳಿಗೆ ಇಂತಹ ಕಾರ್ಯಕ್ಷಮತೆ ಆಧಾರಿತ ಬೋನಸ್ ಘೋಷಿಸುತ್ತದೆ. ಆದರೆ, ಇಎಂಇ ವಿಭಾಗದ ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯನ್ನು ಪರಿಗಣನೆಗೆ ತೆಗೆದುಕೊಂಡು, 2024-25ರ ಲೆಕ್ಕಪತ್ರ ವರ್ಷಕ್ಕೆ ಈ 22 ದಿನಗಳ ಬೋನಸ್ ಅನ್ನು ಈಗ ಮಂಜೂರು ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ನೇಮಕಾತಿ : ವರ್ಷಕ್ಕೆ 20 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್



















