ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗವನ್ನು ಬಯಸುತ್ತೀರಾದರೆ, ತಮಿಳು(Tamil Language) ಓದಲು ಮತ್ತು ಬರೆಯಲು ತಿಳಿದಿರಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ತೀರ್ಪು ನೀಡಿದೆ.
ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ಭಾಷಾ ಯುದ್ಧ ಮುಂದುವರಿದಿರುವಾಗಲೇ ಇಂಥದ್ದೊಂದು ತೀರ್ಪು ಹೊರಬಿದ್ದಿದೆ.
ತಮಿಳುನಾಡು ವಿದ್ಯುತ್ ಮಂಡಳಿಯ (ಟಿಎನ್ಇಬಿ) ಕಿರಿಯ ಸಹಾಯಕರೊಬ್ಬರು ಕಡ್ಡಾಯ ತಮಿಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ತೀರ್ಪು ಬಂದಿದೆ.
ಸರ್ಕಾರಿ ಉದ್ಯೋಗ ಪಡೆದವರು ನಿಗದಿತ ಎರಡು ವರ್ಷಗಳಲ್ಲಿ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ನಿಯಮವಿದೆ. ಆದರೆ, ಅದರಲ್ಲಿ ಉತ್ತೀರ್ಣರಾಗಲು ವಿಫಲವಾದ ಕಾರಣ ಥೇಣಿಯ ಎಂ.ಜೈಕುಮಾರ್ ಎಂಬ ಟಿಎನ್ಇಬಿ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನನ್ನ ತಂದೆ ನೌಕಾ ಸೇವೆಯಲ್ಲಿದ್ದ ಕಾರಣ ನಾನು ಸಿಬಿಎಸ್ಇ ಶಾಲೆಗಳಲ್ಲಿ ಅಧ್ಯಯನ ಮಾಡಿದ್ದೆ. ಹೀಗಾಗಿ ನಾನು ತಮಿಳು ಕಲಿಯಲಿಲ್ಲ ಎಂಬುದು ಅವರ ವಾದವಾಗಿತ್ತು.
ಟಿಎನ್ಇಬಿ ವಿರುದ್ಧ ಜೈಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಆರ್, ಪೂರ್ಣಿಮಾ ಅವರಿದ್ದ ನ್ಯಾಯಪೀಠ, ತಮಿಳು ಗೊತ್ತಿಲ್ಲದೆ ಸರ್ಕಾರಿ ಉದ್ಯೋಗಿ ಹೇಗೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ಪ್ರಶ್ನಿಸಿದರು. “ಸರ್ಕಾರಿ ನೌಕರರಿಗೆ ತಮಿಳು ಗೊತ್ತಿಲ್ಲದಿದ್ದರೆ ಏನು ಮಾಡಲು ಸಾಧ್ಯ? ಅವರು ದೈನಂದಿನ ಕಾರ್ಯಗಳನ್ನು ಹೇಗೆ ನಿರ್ವಹಿಸುತ್ತಾರೆ? ಯಾವುದೇ ರಾಜ್ಯದಲ್ಲಿ, ಸರ್ಕಾರಿ ನೌಕರರು ಆ ರಾಜ್ಯದ ಭಾಷೆಯನ್ನು ತಿಳಿದಿರಲೇಬೇಕು. ಇಲ್ಲದಿದ್ದರೆ, ಏನು ಮಾಡಲು ಸಾಧ್ಯ?” ಎಂದು ನ್ಯಾಯಪೀಠ ಪ್ರಶ್ನಿಸಿತು.
ತಮಿಳು ಗೊತ್ತಿಲ್ಲ ಎಂದ ಮೇಲೆ ನೀವು ಸರ್ಕಾರಿ ಉದ್ಯೋಗವನ್ನು ಯಾಕೆ ಪಡೆಯಬೇಕು ಎಂದು ಪ್ರಶ್ನಿಸಿದ ನ್ಯಾಯಪೀಠ, ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಸರ್ಕಾರದ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಒತ್ತಿಹೇಳಿತು.
ರಾಜ್ಯದಲ್ಲಿ ಭಾಷಾ ಯುದ್ಧ ತೀವ್ರಗೊಂಡಿರುವ ಸಮಯದಲ್ಲೇ ಈ ತೀರ್ಪು ಬಂದಿದೆ. ರಾಜ್ಯದ ಮೇಲೆ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರಿಕೆ ಮಾಡುತ್ತಿದೆ ಎನ್ನುವುದು ತಮಿಳುನಾಡು ಸರ್ಕಾರದ ವಾದವಾಗಿದೆ.