ಬೆಂಗಳೂರು: ಯಾರೂ ರಾತ್ರೋರಾತ್ರಿ ಕೋಟ್ಯಧೀಶರಾಗಲು ಸಾಧ್ಯವಿಲ್ಲ. ಅದರಲ್ಲೂ, ಬೆಲೆಯೇರಿಕೆಯ ಕಾಲದಲ್ಲಿ ಕೋಟಿ ರೂಪಾಯಿ ಗಳಿಸುವುದು ಎಂದರೆ ಕಷ್ಟ. ಆದರೆ, ಮಧ್ಯಮ ವರ್ಗದವರೂ ಕೋಟಿ ರೂಪಾಯಿ ಗಳಿಸಲು ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ ಅಥವಾ ಎಸ್ ಐ ಪಿಯೇ ರಾಮಬಾಣವಾಗಿದೆ. ಹಾಗಾಗಿ, ತಿಂಗಳಿಗೆ 16 ಸಾವಿರ ರೂಪಾಯಿಯನ್ನು ಎಸ್ ಐ ಪಿಯಲ್ಲಿ ಹೂಡಿಕೆ ಮಾಡಿದರೆ, ಎಷ್ಟು ವರ್ಷಗಳಿಗೆ ಕೋಟಿ ರೂಪಾಯಿ ಗಳಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.
ನೀವು ಪ್ರತಿ ತಿಂಗಳು 16 ಸಾವಿರ ರೂಪಾಯಿಯನ್ನು 10 ವರ್ಷಗಳವರೆಗೆ ಎಸ್ಐಪಿಯಲ್ಲಿ ಹೂಡಿಕೆ ಮಾಡಿದಿರಿ ಎಂದಿಟ್ಟುಕೊಳ್ಳಿ, ಅದು ಶೇ.12ರ ರಿಟರ್ನ್ಸ್ ಲೆಕ್ಕಾಚಾರದಲ್ಲಿ ಒಟ್ಟು 35.84 ಲಕ್ಷ ರೂಪಾಯಿ ರಿಟರ್ನ್ಸ್ ಸಿಗುತ್ತದೆ. 10 ವರ್ಷದಲ್ಲಿ ನೀವು ರೂ 19.2 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಇದಕ್ಕೆ ರಿಟರ್ನ್ಸ್ ಸೇರಿ 35.84 ಲಕ್ಷ ರೂಪಾಯಿ ಆಗುತ್ತದೆ.
ಆದರೆ, ಇದೇ ಮೊತ್ತವನ್ನು ನೀವು 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ ನೀವು ಖಂಡಿತವಾಗಿಯೂ ಕೋಟ್ಯಧೀಶರಾಗುತ್ತೀರಿ. ನೀವು ಮಾಡಿದ ಒಟ್ಟು ಹೂಡಿಕೆ 38.4 ಲಕ್ಷ ರೂ. ಆದರೆ, ರಿಟರ್ನ್ಸ್ ಸೇರಿ ಅಂದಾಜು ನಿಧಿ 1.47 ಕೋಟಿ ರೂ. ಆಗುತ್ತದೆ.
ಅದೇ ರೀತಿ, 30 ವರ್ಷಗಳ ನಂತರ ಎಷ್ಟು ಸಿಗುತ್ತದೆ ಎಂದರೆ ನಿಮಗೆ ಅಚ್ಚರಿಯಾಗುತ್ತದೆ. ನೀವು ಮಾಡುವ ಹೂಡಿಕೆ 57.6 ಲಕ್ಷ ರೂಪಾಯಿ ಆದರೆ, ರಿಟರ್ನ್ಸ್ ಸೇರಿ ಒಟ್ಟು 4.93 ಕೋಟಿ ರೂ. ಸಿಗುತ್ತದೆ. ಎಸ್ಐಪಿಯಲ್ಲಿ ಸುದೀರ್ಘ ಅವಧಿಗೆ ಹೂಡಿಕೆ ಮಾಡಿದಂತೆಲ್ಲ, ಕಾಂಪೌಂಡಿಂಗ್ ಅಥವಾ ಚಕ್ರಬಡ್ಡಿಯ ಲಾಭವು ನಿಮಗೆ ಹೆಚ್ಚಾಗಿ ಸಿಗುತ್ತದೆ.
ಗಮನಿಸಿ: ಮ್ಯೂಚುವಲ್ ಫಂಡ್ ಎಸ್ಐಪಿಯು ಮಾರುಕಟ್ಟೆ ಆಧಾರದ ಮೇಲೆ ಏರಿಳಿತ ಕಾಣುತ್ತದೆ. ಹಾಗಾಗಿ, ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದನ್ನು ಮರೆಯಬೇಡಿ. ನಾವು ಮಾಹಿತಿ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಿದ್ದೇವೆ.