ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI( ಇತ್ತೀಚೆಗೆ ರೆಪೋ ದರವನ್ನು ಶೇ. 1ರಷ್ಟು ಇಳಿಕೆ ಮಾಡಿರುವ ಕಾರಣ ಹೆಚ್ಚಿನ ಬ್ಯಾಂಕ್ ಗಳು ಎಫ್ ಡಿ, ಸೇವಿಂಗ್ಸ್ ಸೇರಿ ಹಲವು ಠೇವಣಿಗಳ ಮೇಲಿನ ಬಡ್ಡಿ ಇಳಿಸಿವೆ. ಹಾಗಾಗಿ ನಾಗರಿಕರು ಬ್ಯಾಂಕ್ ಗಳಲ್ಲಿ ಎಫ್ ಡಿ ಇರಿಸಲು ಹಿಂಜರಿಯುತ್ತಿದ್ದಾರೆ. ಹೀಗಿದ್ದರೂ ಕೆಲವು ಬ್ಯಾಂಕ್ ಗಳಲ್ಲಿ ಎಫ್ ಡಿ ಹೂಡಿಕೆ ಮೇಲಿನ ಬಡ್ಡಿ ಉತ್ತಮವಾಗಿದೆ. ಅಂತಹ ಬ್ಯಾಂಕ್ ಗಳ ಪೈಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉತ್ತಮ ಆಯ್ಕೆಯಾಗಿದೆ.
ಹೌದು, PNB ತನ್ನ ವಿವಿಧ ಎಫ್‌ಡಿಗಳ ಮೇಲೆ 3.25% ರಿಂದ 7.25% ವರೆಗೆ ಬಡ್ಡಿ ನೀಡುತ್ತಿದೆ. ಈ 390 ದಿನಗಳ ಯೋಜನೆಗೆ ಆಕರ್ಷಕ ಬಡ್ಡಿ ನಿಗದಿಪಡಿಸಿದೆ. ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ 6.70%, ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ): ವಾರ್ಷಿಕ 7.20% ಬಡ್ಡಿ ನಿಗದಿ ಪಡಿಸಿದೆ. ಇದರಲ್ಲಿ ಗ್ರಾಹಕರು ಎಫ್ ಡಿ ಇರಿಸುವ ಮೂಲಕ ಉತ್ತಮ ರಿಟರ್ನ್ಸ್ ಪಡೆಯಬಹುದಾಗಿದೆ.
ಉದಾಹರಣೆ ಸಮೇತ ಹೇಳುವುದಾದರೆ, ನೀವು ಈ ಯೋಜನೆಯಲ್ಲಿ 3,00,000 ರೂ. ಹೂಡಿಕೆ ಮಾಡಿದರೆ, 390 ದಿನಗಳ ನಂತರ ನಿಮ್ಮ ಕೈಗೆ ಎಷ್ಟು ಹಣ ಬರುತ್ತದೆ ಎಂಬುದರ ಸರಳ ಲೆಕ್ಕಾಚಾರ ಇಲ್ಲಿದೆ. ನೀವು ಸಾಮಾನ್ಯ ಗ್ರಾಹಕರಾಗಿದ್ದು, 3 ಲಕ್ಷವನ್ನು 6.70% ಬಡ್ಡಿ ದರದಲ್ಲಿ 390 ದಿನಗಳ ಕಾಲ ಇಟ್ಟರೆ, ನಿಮಗೆ ಮೆಚ್ಯೂರಿಟಿ ಸಮಯದಲ್ಲಿ ಒಟ್ಟು 3,22,073 ರೂ. ಸಿಗುತ್ತದೆ. ಅಂದರೆ, ನಿಮಗೆ ಬರೋಬ್ಬರಿ 22,073 ರೂ ಬಡ್ಡಿ ರೂಪದಲ್ಲಿ ಲಾಭ ಸಿಕ್ಕಂತಾಗುತ್ತದೆ.
ಅಲ್ಲದೆ, ನೀವು ಹಿರಿಯ ನಾಗರಿಕರಾಗಿದ್ದು, 3 ಲಕ್ಷವನ್ನು 7.20% ಬಡ್ಡಿ ದರದಲ್ಲಿ ಠೇವಣಿ ಇಟ್ಟರೆ, ನಿಮ್ಮ ಖಾತೆಗೆ ಒಟ್ಟು 3,23,768 ರೂ. ಜಮಾ ಆಗುತ್ತದೆ. ಇಲ್ಲಿ ನಿಮಗೆ ಸಿಗುವ ಬಡ್ಡಿಯ ಮೊತ್ತ 23,768 ರೂಪಾಯಿ. ಸಾಮಾನ್ಯ ಗ್ರಾಹಕರಿಗಿಂತ ಸುಮಾರು 1,700 ರೂ. ಹೆಚ್ಚು ಲಾಭ ಸಿಕ್ಕಂತಾಗುತ್ತದೆ.