ಉಡುಪಿ : ಸದ್ಯ ರಾಜ್ಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರಿಗೆ, ಆರ್.ಎಸ್.ಎಸ್. ಚಟುವಟಿಕೆಗಳನ್ನು ಸರ್ಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ಮಾಡದಂತೆ ನಿಷೇಧ ಹೇರುವಂತೆ ಬರೆದಿರುವ ಪತ್ರ ಸಂಚಲವನ್ನು ಮೂಡಿಸಿದ್ದು, ಈ ಕುರಿತು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಆರ್.ಎಸ್.ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ವಿಷಯದ ಕುರಿತು ಮಾತನಾಡಿದ ಸುನಿಲ್ ಕುಮಾರ್ “ರಾಷ್ಟೀಯ ಸ್ವಯಂ ಸೇವಕ ಸಂಘ ಕಳೆದ ನೂರು ವರ್ಷಗಳಿಂದ ವ್ಯಕ್ತಿ ನಿರ್ಮಾಣದಲ್ಲಿ, ರಾಷ್ಟ್ರ ಪುನರ್ ನಿರ್ಮಾಣದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಇದರ ಅರಿವಿಲ್ಲದೇ ಆರ್.ಎಸ್.ಎಸ್ ವಿರುದ್ಧ ಮಾತಾಡುತ್ತಿರುವುದು ಇದೇ ಮೊದಲನೇ ಬಾರಿ ಅಲ್ಲ. ಪ್ರಿಯಾಂಕ್ ಖರ್ಗೆಗೆ ಮಾಧ್ಯಮದ ಮುಂದೆ ಬಂದು ಮಾತಾಡುವ ಚಟ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎರಡುವರೇ ವರ್ಷದಿಂದ ಇವರು ಇಲಾಖೆಯಲ್ಲಿ ಕತ್ತೆ ಕಾಯುತ್ತಿದ್ದಾರೆ. ಜನರಿಗೆ ಹತ್ತಿರವಾಗುವಂತಹ ಯಾವುದೇ ಕೆಲಸಗಳು ನಡೆದಿಲ್ಲ. ಹೀಗಾಗಿ ಪ್ರಚಾರಕ್ಕೆ ಆರ್.ಎಸ್.ಎಸ್ ಎನ್ನುವಂತದ್ದನ್ನು ಬಳಸಿಕೊಳ್ಳುತ್ತಿದ್ದಾರೆ. ತಂದೆ ಎಐಸಿಸಿ ಅಧ್ಯಕ್ಷ, ತಾನು ಮಂತ್ರಿ ಎನ್ನುವ ಅಧಿಕಾರದ ಮದದಿಂದ ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ತಂದೆ ಗೃಹಮಂತ್ರಿ ಆಗಿದ್ದಾಗಲೇ ಏನು ಮಾಡಲಿಕ್ಕೆ ಆಗಲಿಲ್ಲ, ನಿಮಗೆ ತಾಕತ್ತಿದ್ದರೆ ಆರ್.ಎಸ್.ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಿ, ಚುನಾವಣೆಯಲ್ಲಿ ಎದುರಿಸುತ್ತೇವೆ” ಎಂದು ಕಿಡಿಕಾರಿದ್ದಾರೆ.