ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಮತ್ತು ರಸ್ತೆ ಗುಂಡಿ ಅಸಹನೀಯ ಎಂಬ ಮಟ್ಟಿಗೆ ಆಗಿದ್ದು, ಕಾಂಗ್ರೆಸ್ ಬಂದರೆ ರಸ್ತೆಗಳಲ್ಲಿ ಸಿಡುಬು ರೋಗ ಕಾಣಿಸಿಕೊಳ್ಳುತ್ತದೆ ಎಂದು ಯಾರೋ ತಮಾಷೆ ಮಾಡುತ್ತಿದ್ದರು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿ ವಿಚಾರವಾಗಿ ವರದಿಗಾರರಿಗೆ ಸ್ಪಂದಿಸಿದ ಸಿ.ಟಿ.ರವಿ, ಎರಡು ತಿಂಗಳಲ್ಲಿ ಇವರು ಗುಂಡಿ ಮುಚ್ಚುತ್ತಾರೋ ಅಥವಾ ಜನರೇ ಇವರನ್ನು ಗುಂಡಿಯಲ್ಲಿ ಮುಚ್ಚುತ್ತಾರೋ ನೋಡೋಣ ಎಂದು ವ್ಯಂಗ್ಯಾ ಮಾಡಿದ್ದಾರೆ.
ಇನ್ನೂ ಇದೆ ವೇಳೆ ರೇರಾ ಅಕ್ರಮ ವಿಚಾರವಾಗಿ ಮಾತನಾಡಿ, ಗ್ರಾಹಕರಿಗೆ ಮೋಸ ಆಗಬಾರದು ಎಂಬ ಬದ್ಧತೆಯಿಂದ ರೇರಾ ಕಾಯ್ದೆ ಜಾರಿಗೆ ತರಲಾಗಿತ್ತು. ಈ ಕಾಯ್ದೆ ಒಳ್ಳೆಯದೇ, ಆದರೆ ಭ್ರಷ್ಟರ ಕೈಯಲ್ಲಿ ಸಿಕ್ಕರೆ ಏನಾಗುತ್ತೆ ಎನ್ನುವುದಕ್ಕೆ ಕರ್ನಾಟಕವೇ ಸೂಕ್ತ ಉದಾಹರಣೆಯಾಗಿದೆ. ರೇರಾ ವಸೂಲಿ ಕೇಂದ್ರವಾಗಿದ್ದು, ಅಕ್ರಮವನ್ನು ನೋಡಿಯೂ ನೋಡದಂತೆ ಕಣ್ಮುಚ್ಚಿಕೊಂಡು ಇರುವ ಸ್ಥಿತಿ ಬಂದಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.



















