ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಮೊಘಲ್ ದೊರೆ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಲು ಭಾರಿ ಒತ್ತಾಯ ಕೇಳಿಬರುತ್ತಿದೆ. ಔರಂಗಜೇಬನ ಸಮಾಧಿ (Aurangzeb Tomb) ತೆರವುಗೊಳಿಸದಿದ್ದರೆ ಬಾಬ್ರಿ ಮಸೀದಿ ಧ್ವಂಸಗೊಳಿಸಿದಂತೆ ನಾವೇ ಧ್ವಂಸಗೊಳಿಸುತ್ತೇವೆ ಎಂದು ಸರ್ಕಾರಕ್ಕೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಅಷ್ಟೇ ಅಲ್ಲ, ಔರಂಗಜೇಬ್ ಮಸೀದಿ ತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಯನ್ನೂ ನಡೆಸುತ್ತಿವೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.
“ಮಹಾರಾಷ್ಟ್ರದಲ್ಲಿ ಔರಂಗಜೇಬನ ಸಮಾಧಿ ಇರುವುದು ಗುಲಾಮಗಿರಿಯ ಸಂಕೇತವಾಗಿದೆ. ಕೂಡಲೇ ಇದನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ, ಕರಸೇವಕರು 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದಂತೆ, ನಾವು ಕೂಡ ಔರಂಗಜೇಬನ ಸಮಾಧಿಯನ್ನು ಧ್ವಂಸಗೊಳಿಸುತ್ತೇವೆ” ಎಂದು ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಹಿಂದೂ ಸಂಘಟನೆಗಳ ಬೇಡಿಕೆಗೆ ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕರು ಕೂಡ ಬೆಂಬಲ ಸೂಚಿಸಿದ್ದಾರೆ. “ಏಕನಾಥ್ ಶಿಂಧೆ ಬಣದ ಶಿವಸೇನೆಯೂ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಬಯಸುತ್ತದೆ” ಎಂದು ಸಚಿವ ಸಂಜಯ್ ಶಿರ್ಸತ್ ಹೇಳಿದ್ದಾರೆ. ಮತ್ತೊಂದೆಡೆ, ಸಮಾಧಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ಸೇರಿ ಹಲವು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.