ದುಬೈ: ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸಲ್ಲಿಸಿದ್ದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಖಡಾಖಂಡಿತವಾಗಿ ತಿರಸ್ಕರಿಸಿದೆ. ಸುರಕ್ಷತೆಯ ಕಾರಣಗಳನ್ನು ಮುಂದಿಟ್ಟುಕೊಂಡು ಪಂದ್ಯಗಳ ಸ್ಥಳ ಬದಲಾವಣೆ ಕೋರಿದ್ದ ಬಾಂಗ್ಲಾದೇಶಕ್ಕೆ ಐಸಿಸಿ ಸ್ಪಷ್ಟ ಸಂದೇಶ ರವಾನಿಸಿದ್ದು, ನಿಗದಿತ ವೇಳಾಪಟ್ಟಿಯಂತೆ ಭಾರತದಲ್ಲೇ ಪಂದ್ಯಗಳನ್ನು ಆಡಬೇಕೆಂದು ಸೂಚಿಸಿದೆ.
ಐಸಿಸಿ ಮತ್ತು ಬಿಸಿಬಿ ನಡುವೆ ನಡೆದ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಟೂರ್ನಮೆಂಟ್‌ನ ವೇಳಾಪಟ್ಟಿ ಮತ್ತು ಸ್ಥಳಗಳು ಈಗಾಗಲೆ ನಿಗದಿಯಾಗಿದ್ದು, ಯಾವುದೇ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ ಎಂದು ಐಸಿಸಿ ತಿಳಿಸಿದೆ. ಒಂದು ವೇಳೆ ಬಾಂಗ್ಲಾದೇಶ ತಂಡವು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಅಥವಾ ಪಂದ್ಯಗಳನ್ನು ಬಹಿಷ್ಕರಿಸಿದರೆ, ಅದು ಕ್ರೀಡಾ ನಿಯಮಾವಳಿಗಳ ಪ್ರಕಾರ ಅಂಕಗಳನ್ನು (Points) ಕಳೆದುಕೊಳ್ಳುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಐಪಿಎಲ್ ವಿವಾದ ಮತ್ತು ರಾಜಕೀಯ ಬಿಕ್ಕಟ್ಟು
ಈ ಸಂಘರ್ಷದ ಮೂಲ ಐಪಿಎಲ್ ವಿವಾದದಲ್ಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹತ್ಯೆಗಳನ್ನು ಖಂಡಿಸಿ ಭಾರತದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಡುವಂತೆ ಒತ್ತಡ ಹೇರಲಾಗಿತ್ತು. ಅಂತಿಮವಾಗಿ ಬಿಸಿಸಿಐ ಮುಸ್ತಾಫಿಜುರ್ ಅವರನ್ನು ಐಪಿಎಲ್‌ನಿಂದ ಹೊರಹಾಕುವ ನಿರ್ಧಾರ ಕೈಗೊಂಡಿತ್ತು.
ಇದಕ್ಕೆ ಪ್ರತಿಯಾಗಿ, ಸುರಕ್ಷತೆ ಮತ್ತು ಭದ್ರತೆಯ ನೆಪವೊಡ್ಡಿ ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಬಿಸಿಬಿ ಕಳೆದ ಭಾನುವಾರ ಐಸಿಸಿಗೆ ಮನವಿ ಮಾಡಿತ್ತು. ತನ್ನ ಪಂದ್ಯಗಳನ್ನು ವಿಶ್ವಕಪ್‌ನ ಜಂಟಿ ಆತಿಥ್ಯ ವಹಿಸಿರುವ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಕೋರಿತ್ತು. ಆದರೆ, ಐಸಿಸಿ ಈ ಕೋರಿಕೆಯನ್ನು ಮನ್ನಿಸಿಲ್ಲ. ಆದಾಗ್ಯೂ, ಐಸಿಸಿಯ ನಿರಾಕರಣೆಯ ಬಗ್ಗೆ ತಮಗೆ ಇನ್ನೂ ಯಾವುದೇ ಅಧಿಕೃತ ಲಿಖಿತ ಮಾಹಿತಿ ಬಂದಿಲ್ಲ ಎಂದು ಬಿಸಿಬಿ ಮೂಲಗಳು ತಿಳಿಸಿವೆ.
ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರ ಬಂದ್?
ಭಾರತದ ನಡೆಗೆ ತಿರುಗೇಟು ನೀಡುವ ಸಲುವಾಗಿ, ಬಾಂಗ್ಲಾದೇಶವು ಮುಂಬರುವ ಐಪಿಎಲ್ ಋತುವಿನ ಪ್ರಸಾರವನ್ನು ತನ್ನ ದೇಶದಲ್ಲಿ ನಿಷೇಧಿಸಲು ಮುಂದಾಗಿದೆ. ಈ ಬೆಳವಣಿಗೆಗಳ ಕುರಿತು ಮಾತನಾಡಿದ್ದ ಬಿಸಿಬಿ ಅಧ್ಯಕ್ಷ ಫಾರೂಕ್ ಅಹ್ಮದ್, ಎರಡು ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧ ಹದಗೆಡಲು ರಾಜಕೀಯವೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು. ಒಟ್ಟಿನಲ್ಲಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪೈಪೋಟಿ ಇದೀಗ ರಾಜಕೀಯ ಮತ್ತು ರಾಜತಾಂತ್ರಿಕ ಸಂಘರ್ಷವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ಗೂ ಮುನ್ನ ನಾಯಕ ಸೂರ್ಯನಿಗೆ ಫಾರ್ಮ್ ಚಿಂತೆ



















