ದುಬೈ: ಭಾರತದ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಪ್ರಚೋದನಕಾರಿ ವರ್ತನೆ ತೋರಿದ್ದ ಪಾಕಿಸ್ತಾನದ ಆಟಗಾರರ ವಿರುದ್ಧ ಐಸಿಸಿ ಕೊನೆಗೂ ಕ್ರಮ ಕೈಗೊಂಡಿದೆ. ಆಕ್ರಮಣಕಾರಿ ಸನ್ನೆಗಳ ಮೂಲಕ ವಿವಾದ ಸೃಷ್ಟಿಸಿದ್ದ ವೇಗಿ ಹ್ಯಾರಿಸ್ ರೌಫ್ ಅವರ ಪರ್ಸ್‌ಗೆ ಕತ್ತರಿ ಬಿದ್ದಿದ್ದರೆ, ‘ಗನ್’ ಸಂಭ್ರಮಾಚರಣೆ ಮಾಡಿದ್ದ ಸಾಹಿಬ್‌ಜಾದಾ ಫರ್ಹಾನ್ ಎಚ್ಚರಿಕೆಯೊಂದಿಗೆ ಪಾರಾಗಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನೀಡಿದ್ದ ದೂರಿನನ್ವಯ ನಡೆದ ವಿಚಾರಣೆಯಲ್ಲಿ, ಹ್ಯಾರಿಸ್ ರೌಫ್ ಅವರ ಪಂದ್ಯದ ಶುಲ್ಕದಲ್ಲಿ ಶೇ. 30ರಷ್ಟು ದಂಡ ವಿಧಿಸಲಾಗಿದೆ. ಆದರೆ, ಸಾಹಿಬ್‌ಜಾದಾ ಫರ್ಹಾನ್ ಅವರಿಗೆ ಯಾವುದೇ ಆರ್ಥಿಕ ದಂಡ ವಿಧಿಸದೆ, ಕೇವಲ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಬಿಡಲಾಗಿದೆ.
“ತಪ್ಪು ಮಾಡಿಲ್ಲ” ಎಂದಿದ್ದರು.
ಶುಕ್ರವಾರ ಮ್ಯಾಚ್ ರೆಫರಿ ರಿಚೀ ರಿಚರ್ಡ್‌ಸನ್ ಅವರ ಮುಂದೆ ಹಾಜರಾದ ಇಬ್ಬರೂ ಆಟಗಾರರು, ಆರಂಭದಲ್ಲಿ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ಐಸಿಸಿ ಈ ಶಿಸ್ತು ಕ್ರಮವನ್ನು ಪ್ರಕಟಿಸಿದೆ.[3]
ಏನಿದು ವಿವಾದ?
ಕಳೆದ ಭಾನುವಾರದ ಪಂದ್ಯದಲ್ಲಿ, ಭಾರತೀಯ ಅಭಿಮಾನಿಗಳು “ಕೊಹ್ಲಿ, ಕೊಹ್ಲಿ” ಎಂದು ಕೂಗಿದಾಗ, ಹ್ಯಾರಿಸ್ ರೌಫ್ ವಿಮಾನ ಪತನದ ರೀತಿಯಲ್ಲಿ ಸನ್ನೆ ಮಾಡಿ ಅಣಕಿಸಿದ್ದರು. ಫರ್ಹಾನ್, ಅರ್ಧಶತಕದ ನಂತರ ಬ್ಯಾಟನ್ನು ಗನ್‌ನಂತೆ ಹಿಡಿದು ವಿವಾದಾತ್ಮಕವಾಗಿ ಸಂಭ್ರಮಿಸಿದ್ದರು. ಈ ಎರಡೂ ಘಟನೆಗಳು ಭಾರತೀಯ ತಂಡ ಮತ್ತು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದವು.
ಏಷ್ಯಾ ಕಪ್ ಫೈನಲ್‌ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುವ ಮುನ್ನ ಐಸಿಸಿ ತೆಗೆದುಕೊಂಡಿರುವ ಈ ನಿರ್ಧಾರ, ಕ್ರೀಡಾ ಸ್ಫೂರ್ತಿ ಮೀರಿದ ವರ್ತನೆಗಳನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.



















