ಬೆಂಗಳೂರು : ರಾಜ್ಯ ರಾಜಕಾರಣಕ್ಕೆ ಮತ್ತೆ ಬರುತ್ತೇನೆ ಎಂದು ಸಂಕ್ರಾಂತಿ ಹಬ್ಬದ ದಿನವೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ರಾಜ್ಯ ರಾಜಕೀಯದಿಂದ ನಾನು ದೂರ ಸರಿಯೋದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಎಲ್ಲಿ ಇರಬೇಕು ಅಂತ ತೀರ್ಮಾನ ಮಾಡೋದು ರಾಜ್ಯದ ಜನತೆ. ನಾವು ಮೈತ್ರಿಯ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಒಳ್ಳೆ ಸರ್ಕಾರ ತರಬೇಕು ಅನ್ನೋದು. ವೈಯಕ್ತಿಕವಾಗಿ ನನ್ನ ಉದ್ದೇಶ ಇದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಅಂತ ಗಮನಿಸುತ್ತಿದ್ದೇನೆ. ಒಳ್ಳೆ ಸರ್ಕಾರ ತಂದು ಜನತೆ ನೆಮ್ಮದಿಯಿಂದ ಇರಬೇಕು. ಆ ನಿಟ್ಟಿನಲ್ಲಿ ನಾಡಿನ ಜನತೆ ನಾನು ಯಾವ ಸ್ಥಾನದಲ್ಲಿ ಇರಬೇಕು ಅಂತ ತೀರ್ಮಾನ ಮಾಡೋದು ಅವರು. ನನ್ನ ಕೈಯಲ್ಲಿ ಇಲ್ಲ. ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದ್ರು ತಿಳಿದುಕೊಂಡಿದ್ರೆ, ನಾನು ದೂರ ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ರಾಜಕಾರಣದಲ್ಲಿ ಇರ್ತೀನಿ. ಕೇಂದ್ರದಲ್ಲಿ ಪ್ರಧಾನಿಗಳು ಹುದ್ದೆ ಕೊಟ್ಟಿದ್ದಾರೆ. ಆ ಎರಡು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡೋಕೆ ಈಗಾಗಲೇ ಫೌಂಡೇಶನ್ ಹಾಕಿದ್ದೇನೆ. ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ತೀರ್ಮಾನ ಮಾಡ್ತೀನಿ. ರಾಜ್ಯ ರಾಜಕೀಯಕ್ಕೆ ಬರಲೇಬೇಕಾಗುತ್ತದೆ. ಯಾವಾಗ ಅಂತ ತೀರ್ಮಾನ ಮಾಡ್ತೀನಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನ್ಯೂಜೆರ್ಸಿಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದ ಭಾರತೀಯ ಮಹಿಳೆ ಬಂಧನ



















