ಬೆಂಗಳೂರು: ದೇವೇಗೌಡರ ಮಾತು ನನಗೆ ತುಂಬಾ ನೋವು ನೀಡಿತ್ತು. ನನ್ನ ಅಹಂಕಾರ ಮುರಿತ್ತೇನೆ. ಸೊಕ್ಕು ಮುರಿದು ಮನೆಗೆ ಕಳುಹಿಸುತ್ತೇನೆ ಎಂಬ ಆವರ ಮಾತಿಗೆ ನಾನು ಬೇಸರ ಪಟ್ಟಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಆರೋಪ ನನಗೆ ಬಹಳ ಬೇಸರ ತರಿಸಿದೆ. ನಾನು ಬಹಳ ವರ್ಷ ಅವರ ಜೊತೆಗೆ ಇದ್ದವನು. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ನನ್ನ ಗುರಿ, ಸಿದ್ದರಾಮಯ್ಯನ ಅಹಂಕಾರ, ಸೊಕ್ಕು ಮುರಿತೀನಿ ಎಂದೆಲ್ಲಾ ಮಾತನಾಡಿದ್ದು, ಬೇಸರ ಮೂಡಿಸಿತ್ತು. ನನ್ನಲ್ಲಿ ಸೊಕ್ಕಿಲ್ಲ. ಜನರು ಅವಕಾಶ ಕೊಟ್ಟಾಗ ಅಧಿಕಾರ ನಡೆಸಿದ್ದೇನೆ. ಕುಟುಂಬಸ್ಥರನ್ನು ರಾಜಕಾರಣಕ್ಕೆ ತರುವ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.
ಈ ಚುನಾವಣೆಯು ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ-ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಈ ಚುನಾವಣೆಯಲ್ಲಿ ಮೆಟ್ಟಿ ನಿಂತು ಜಯ ಸಾಧಿಸಿದ್ದೇವೆ ಎಂದಿದ್ದಾರೆ.
ಮತದಾರರು ನಮ್ಮ ಸರ್ಕಾರದ ಸಾಧನೆಗಳನ್ನು ಬೆಂಬಲಿಸುತ್ತ ಬರುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾದ ನಂತರ ನನ್ನ ಮತ್ತು ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ನನ್ನ ಚಾರಿತ್ರ್ಯ ಹರಣ ಮಾಡುವ ಪ್ರಯತ್ನವನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತ ಬಂದರು. ರಾಜಭವನದಿಂದ ಹಿಡಿದು ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿ ಹಗರಣವನ್ನು ಸೃಷ್ಟಿಸಿ, ನನ್ನನ್ನು ಮತ್ತು ನನ್ನ ಕುಟುಂಬವನ್ನು ಹಣಿಯುವ ಪ್ರಯತ್ನ ಮಾಡಿದ್ದರು. ರಾಜಕೀಯ ದ್ವೇಷಸಾಧನೆಗಾಗಿ ನನ್ನ ಕುಟುಂಬದ ವಿರುದ್ಧವೂ ಸುಳ್ಳು ಆರೋಪವನ್ನು ಮಾಡಿ ತನಿಖೆ ನಡೆಸುವಂತೆ ಮಾಡಿದರು. ನಾನು ದಂತದ ಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ ಜನರೊಂದಿಗೆ ಇದ್ದವ. ಗ್ಯಾರಂಟಿ ಯೋಜನಗಳ ಫಲಾನುಭವಿಗಳು ಖುಷಿಯಾಗಿದ್ದಾರೆ. ಪ್ರಧಾನಿಯವರೇ ನಮ್ಮ ಗ್ಯಾರಂಟಿ ಯೋಜನೆ ಅನುಷ್ಠಾನದ ಬಗ್ಗೆ ಸುಳ್ಳು ಹೇಳಿದರು. ಮಹಾರಾಷ್ಟ್ರದಲ್ಲಿ ಸುಳ್ಳು ಜಾಹೀರಾತು ನೀಡಿದ್ದರು. ಆದರೆ, ಇವುಗಳಿಗೆ ಜನರು ಉತ್ತರ ನೀಡಿದ್ದಾರೆ. ಆದರೆ, ಜನರು ಈ ಸುಳ್ಳು ಆರೋಪಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದಿದ್ದಾರೆ.
ನಾವು ಶಿಗ್ಗಾಂವ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದಾಗ ಒಂದಷ್ಟು ವಿರೋಧ ವ್ಯಕ್ತವಾಗಿದ್ದದು ನಿಜ. ಇದರಿಂದ ಹಿಂದೂ ಮತ ಧ್ರುವೀಕರಣವಾಗುತ್ತದೆ ಎಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದರು. ನನ್ನ ಮೇಲೆಯೂ ಒತ್ತಡ ಇತ್ತು. ಹೀಗಿದ್ದರೂ ಮುಸ್ಲಿಂ ವ್ಯಕ್ತಿಗೆ ಜನ ಮತ ಹಾಕಿದ್ದಾರೆ. ಜಾತಿ-ಧರ್ಮದ ಭೇದ ಮಾಡದೆ ಸಮರ್ಥ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಕೊಂಡೆವು. ಜನ ನಮ್ಮ ಮಾತಿಗೆ ಒಪ್ಪಿಕೊಂಡು ಶಿಗ್ಗಾಂವ್ ನಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.