ಹಾಸನ : ದಸರಾ ಉತ್ಸವವನ್ನು ಉದ್ಘಾಟಿಸಲು ರಾಜ್ಯ ಸರ್ಕಾರ ತಮ್ಮನ್ನು ಆಹ್ವಾನಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್, ಈ ಗೌರವವನ್ನು ಪ್ರೀತಿಯಿಂದ, ಗೌರವದಿಂದ ಸ್ವೀಕರಿಸುವುದಾಗಿ ಹೇಳಿದ್ದಾರೆ.
ರಾಜ್ಯದ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲೆಯನ್ನು ಶ್ರೀಮಂತಗೊಳಿಸುವ ನಾಡ ಹಬ್ಬವನ್ನು ಉದ್ಘಾಟಿಸುವ ದೊಡ್ಡ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ದೊರಕಿಸಿಕೊಟ್ಟಿದೆ. ಇದನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ನಾಡ ಹಬ್ಬ ಹಿಂದೂ ಸಂಸ್ಕೃತಿಯ ಒಂದು ಭಾಗವಾಗಿದೆ. ಸಮಾಜದ ಎಲ್ಲಾ ವರ್ಗಗಳು ಇದನ್ನು ವಾರ್ಷಿಕ ಹಬ್ಬವಾಗಿ ಆನಂದಿಸುತ್ತವೆ. ಲಕ್ಷಾಂತರ ಜನರು ಭಾಗವಹಿಸುವ ದಸರಾದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ದಸರಾ ಉತ್ಸವದ ಪ್ರಮುಖ ದೇವತೆ ಚಾಮುಂಡೇಶ್ವರಿ ದೇವಿಯ ಬಗ್ಗೆ ನನಗೆ ಗೌರವವಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಾವು ಮಗುವಾಗಿದ್ದಾಗ ಪೋಷಕರೊಂದಿಗೆ ಜಂಬೂ ಸವಾರಿ ವೀಕ್ಷಿಸಿದ್ದ ಸಂದರ್ಭವನ್ನೂ ಬಾನು ಮುಷ್ತಾಕ್ ಅವರು ಸ್ಮರಿಸಿಕೊಂಡಿದ್ದಾರೆ.
ಬಾನು ಮುಷ್ತಾಕ್‌ಗೆ ನೀಡಿದ ಆಹ್ವಾನ ಮತ್ತು ವಿರೋಧ ಪಕ್ಷಗಳ ಆಕ್ಷೇಪಣೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ದಸರಾ ಧರ್ಮ ಮತ್ತು ಜಾತಿಗಿಂತ ಮೀರಿದ ಹಬ್ಬ ಎಂದು ಹೇಳಿದ್ದಾರೆ.
ಈ ಉತ್ಸವವನ್ನು ಹಿಂದೆ ಕವಿ ನಿಸಾರ್ ಅಹ್ಮದ್ ಉದ್ಘಾಟಿಸಿದ್ದರು ಮತ್ತು ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ ನೇತೃತ್ವದಲ್ಲಿ ಆಚರಣೆಗಳು ನಡೆದಿವೆ. ಇದು ಎಲ್ಲರೂ ಆಚರಿಸುವ ಹಬ್ಬವಾಗಿದೆ ಎಂದು ತಿಳಿಸಿದ್ದಾರೆ.



















