ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ರಾಜೀನಾಮೆ ಕೊಡುವ ಮಾತೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಂಡತಿ ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿದ್ದಾರೆ. ನನ್ನ ಜೊತೆಗೆ ಚರ್ಚೆ ಮಾಡಿಲ್ಲ. ಅವರ ಸಹೋದರ ನೀಡಿದ್ದ ಜಮೀನು ಅದು. ಮುಡಾ ಅದನ್ನು ಸ್ವಾಧೀನಕ್ಕೆ ಪಡೆದಿತ್ತು.
ಆನಂತರ ಸೈಟ್ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿತ್ತು. ಹೀಗಾಗಿ ಬದಲಿಯಾಗಿ ವಿಜಯ ನಗರದಲ್ಲಿ ಸೈಟ್ ನೀಡಿತ್ತು. ನಾವೇನು ವಿಜಯನಗರದಲ್ಲೇ ಕೊಡಿ ಎಂದು ಮುಡಾಗೆ ಹೇಳಿರಲಿಲ್ಲ ಎಂದು ಸಿಎಂ ಹೇಳಿದ್ದಾರೆ.
ಮನನೊಂದು ನನ್ನ ಯಜಮಾನರಿಗೆ ರಾಜಕೀಯ ತೇಜೋವಧೆ ಆಗುತ್ತಿದೆ. ಹೀಗಾಗಿ ಸೈಟ್ ಬೇಡವೇ ಬೇಡ ಎಂದು ನನ್ನ ಪತ್ನಿ ಮರಳಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಸೈಟ್ ಮರಳಿ ನೀಡಿ ತಪ್ಪು ಒಪ್ಪಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ನನ್ನ ಹೆಂಡತಿ ಮನನೊಂದು ಸೈಟ್ ವಾಪಸ್ ಮಾಡಿದ್ದಾರೆ. ಬಿಜೆಪಿಗರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ರಾಜೀನಾಮೆ ಕೊಟ್ಟರೆ ಮುಗಿದು ಹೋಗುತ್ತಾ? ನಾನು ತಪ್ಪೇ ಮಾಡಿಲ್ಲವಲ್ಲ. ಹೇಗೆ ತಪ್ಪು ಮಾಡಿದಂತಾಗುತ್ತದೆ. ನಾನು ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವ ಪ್ರಮೇಯವೇ ಬರುವುದಿಲ್ಲ ಎಂದಿದ್ದಾರೆ.