ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಕರ್ತವ್ಯದ ಕುರಿತು ಮಾತನಾಡಿದ್ದಾರೆ.
ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ ಕಾಣಿಸಿಕೊಂಡ ಗಂಭೀರ್, ಭಾರತೀಯ ಕ್ರಿಕೆಟ್ ತಂಡದ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು.ಈ ವೇಳೆ ನಾನು ವಿಶ್ವ ಚಾಂಪಿಯನ್ ತಂಡದ ಕೋಚ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅವಕಾಶವನ್ನು ಜವಾಬ್ದಾರಿಯಿಂದ ನಿರ್ವಹಿಸುವೆ ಎಂಬ ವಿಶ್ವಾಸವಿದೆ. ತಂಡವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಲಿದ್ದೇನೆ. ನನ್ನ ಕೋಚಿಂಗ್ನಲ್ಲಿ ನಾನು ಆಟಗಾರರಿಗೆ ಮುಕ್ತ ಅವಕಾಶ ನೀಡುವೆ. 15 ಆಟಗಾರರ ಒಂದು ತಂಡವನ್ನು ಒಟ್ಟಾಗಿ ಮುನ್ನಡೆಸಬೇಕು ಎಂಬುದು ನನ್ನ ಧ್ಯೇಯ ಎಂದು ಹೇಳಿದ್ದಾರೆ.
ನಾನು ಯಶಸ್ವಿ ತಂಡದ ಕೋಚ್ ಸ್ಥಾನವನ್ನು ವಹಿಸಿಕೊಂಡಿದ್ದೇನೆ. ಟಿ20 ವಿಶ್ವ ಚಾಂಪಿಯನ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರನ್ನರ್ ಅಪ್, ಏಕದಿನ ವಿಶ್ವಕಪ್ ನಲ್ಲಿ ಭಾರತ ರನ್ನರ್ ಅಪ್ ಆಗಿದೆ. ಇಲ್ಲಿಂದ ಭಾರತ ತಂಡವನ್ನು ಮುನ್ನಡೆಸಬೇಕಾದ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಆಗಿರಲಿ ಅಥವಾ ಏಕದಿನ ವಿಶ್ವಕಪ್ ಆಗಿರಲಿ. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಾರೆ ಎಂದು ಭಾವಿಸುತ್ತೇನೆ. ನಮ್ಮ ಮುಂದೆ ಈಗ ಚಾಂಪಿಯನ್ಸ್ ಟ್ರೋಫಿ ಇದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಇದೆ. ಈ ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಡೆಯಿಂದ ಅತ್ಯುತ್ತಮ ಪ್ರದರ್ಶನವನ್ನು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.