ಬೆಂಗಳೂರು: ಲಾಲ್ಬಾಗ್ ಹಾಳು ಮಾಡಲು ನಾನು ಮೂರ್ಖನಲ್ಲ. ಲಾಲ್ಬಾಗ್ ಇತಿಹಾಸ ನನಗೆ ಗೊತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು (ಭಾನುವಾರ) ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿಸಿಎಂ, ಟನಲ್ ರಸ್ತೆ ಯೋಜನೆ ನನ್ನ ಆಸ್ತಿಯಲ್ಲ. ಇದು ಸಾರ್ವಜನಿಕರಿಗಾಗಿ ಮಾಡುವ ಯೋಜನೆ. ನಾನು ಎಲ್ಲ ಅಧ್ಯಯನ ಮಾಡಿದ್ದೇನೆ. ಲಾಲ್ಬಾಗ್ನ ಎಷ್ಟು ಜಾಗ ಬಳಸಲಾಗುತ್ತಿದೆ, ಎಷ್ಟು ಜಾಗ ಬಳಸುತ್ತಿಲ್ಲ ಎಂಬ ಮಾಹಿತಿ ನನ್ನಲ್ಲಿದೆ ಎಂದು ತಿಳಿಸಿದ್ದಾರೆ.
ಇಡೀ ಬೆಂಗಳೂರಲ್ಲಿ ಮೆಟ್ರೋಗಾಗಿ ಟನಲ್ ತಂದಿಲ್ವಾ?. ಎಸ್.ಎಂ.ಕೃಷ್ಣ ಕಾಲದಲ್ಲಿ ನಾನು ವಿದೇಶಗಳಿಗೆ ತೆರಳಿ ವರದಿ ಕೊಟ್ಟಿದ್ದೆ. ಅಂದೇ ಟನಲ್ ಪ್ರಸ್ತಾಪ ಕೊಟ್ಟಿದ್ದೆವು. ಕೆ.ಜೆ.ಜಾರ್ಜ್ ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಿದ್ದರು. ಅದಕ್ಕೆ ವಿರೋಧ ಮಾಡಿದ್ದರು. ಈಗ ಅದಕ್ಕೆ ಪರಿಹಾರ ಏನು?. ಸಂಸದ ತೇಜಸ್ವಿ ಸೂರ್ಯ ಬಿಆರ್ಟಿಎಸ್ ವ್ಯವಸ್ಥೆ ಮಾಡಲು ಹೇಳುತ್ತಿದ್ದಾರೆ. ಅವರಿಗೆ ತಲೆ ಇದೆಯಾ?. ಜಾಗ ಇದೆಯಾ?, ಅದರಿಂದ ದಿನಕ್ಕೆ ನೂರು ಜನ ಸಾಯುತ್ತಾರೆ. ಜಾಗ ಎಲ್ಲಿದೆ?. ಅದನ್ನೆಲ್ಲ ವಾಸ್ತವದಲ್ಲಿ ಮಾಡಲು ಆಗುವುದಿಲ್ಲ. ಪರಿಹಾರ ಕೊಡಲಿ. ಟೀಕೆ ಮಾಡುವುದು ಬೇರೆ ವಿಚಾರ. ಒಳ್ಳೆ ಪರಿಹಾರ ಕೊಟ್ಟರೆ ಒಪ್ಪಿಕೊಳ್ಳೋಣ ಎಂದು ಹೇಳಿದ್ದಾರೆ.
ಬಿಜೆಪಿಯವರು ಈಗ ಟನಲ್ ಯೋಜನೆ ವಿರುದ್ಧ ಸಹಿ ಸಂಗ್ರಹ ಮಾಡುತ್ತಿದ್ದಾರಲ್ಲಾ?.ಕರೆ ಕೊಡಲು ನನಗೂ ಗೊತ್ತು. ಅವರಿಗಿಂತ ಹೆಚ್ಚಿಗೆ ಸಂಘಟನೆ ಮಾಡಬಲ್ಲೆ. ಅವರು ಸಂಸ್ಥೆ ಇಟ್ಟುಕೊಂಡು ಸಂಘಟನೆ ಮಾಡುತ್ತಾ ಇದ್ದಾರೆ. ನನಗೆ ಯಾವುದೇ ಸಂಸ್ಥೆ ಇಲ್ಲ. ಪಕ್ಷದಿಂದ ಸಂಘಟನೆ ಮಾಡುತ್ತೇವೆ. ಆರ್ಎಸ್ಎಸ್ ಸಂಘಟನೆ ಇಲ್ಲಎಂದರೆ ಅವರ ಪಕ್ಷ ಜಿರೋ. ಅವರ ಪಾರ್ಟಿ ಬದುಕಿರುವುದು ಆರ್ಎಸ್ಎಸ್ನಿಂದ. ಅವರ ಬಳಿ ಬೇರೆ ಅಸ್ತ್ರ ಇಲ್ಲ ಎಂದು ಟೀಕಿಸಿದ್ದಾರೆ.
ಸಹಿ ಸಂಗ್ರಹ ಮಾಡಲಿ. ಜಾಗೃತಿ ಮೂಡಿಸಲಿ. ಆದರೆ ನಮಗೆ ಏನು ಮಾಡಬೇಕೆಂದು ಒಂದು ಪರಿಹಾರ ಕೊಡಲಿ ಅಷ್ಟೇ. ಆರ್.ಅಶೋಕ್ ನೇತೃತ್ವದಲ್ಲೇ ಸಮಿತಿ ಮಾಡುತ್ತೇನೆ. ಸಲಹೆ ಕೊಡಿ. ಯಾರೆಲ್ಲಾ ಸದಸ್ಯರು ಬೇಕು, ತಾಂತ್ರಿಕ ತಜ್ಞರು ಬೇಕು ಅವರನ್ನೇ ಸಮಿತಿಯಲ್ಲಿ ಹಾಕೋಣ. ಆದರೆ ನನಗೆ ಒಂದು ಪರಿಹಾರ ಬೇಕಷ್ಟೇ ಎಂದಿದ್ದಾರೆ.
ನಮ್ಮ ಶಾಸಕರಿಗೆ ಧಮಕಿ ಹಾಕಲಾಗುತ್ತಿದೆ ಎಂಬ ಆರ್.ಅಶೋಕ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕ ಕೆ.ಸಿ.ರಾಮಮೂರ್ತಿಗೆ ನಾನು ಏಕೆ ಧಮ್ಕಿ ಹಾಕಲಿ?. ಅವನು ನಮ್ಮ ಹುಡುಗನೇ?. ತೇಜಸ್ವಿ ಸೂರ್ಯ ದೊಡ್ಡ ಲೀಡರ್. ಅತೀ ಬುದ್ದಿವಂತ. ಫ್ಲೈಟ್ ಡೋರ್ ಓಪನ್ ಮಾಡಿದ್ದ. ಅಮೆರಿಕಗೆ ಹೋಗಿದ್ದಾಗ ಅನುಮತಿ ಇಲ್ಲದೇ ಟ್ರಂಪ್ ಭೇಟಿ ಮಾಡಲು ಹೋಗಿ ಅಲ್ಲಿ ಉಗಿಸಿಕೊಂಡು ಬಂದಿದ್ದಾರೆ. ಕಾರು ಬೇಡ ಅಂತಿದ್ದವನು ನನ್ನ ಬಳಿ ಮದುವೆ ಆಗುತ್ತಾ ಇದ್ದೇನೆ ಎಂದು ಹೇಳಿ ಹೊಸ ಕಾರಿಗೆ ಅರ್ಜಿ ಕೊಟ್ಟಿದ್ದಾನೆ. ನನ್ನ ಬಳಿ ಪತ್ರ ಇದೆ. ಬೇಕಾದರೆ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಾರು ಬಿಟ್ಟು ಬಿಜೆಪಿ ನಾಯಕರು ಓಡಾಡಲಿ ನೋಡೋಣ. ಬಸ್ಗಳಲ್ಲಿ, ಮೆಟ್ರೋದಲ್ಲಿ ಓಡಾಡಲಿ. ಆಟೋದಲ್ಲಿ ಓಡಾಡಲಿ. ಈ ಡ್ರಾಮಾಗಳನ್ನೆಲ್ಲ ಯಾರು ಕೇಳುತ್ತಾರೆ?. ತೇಜಸ್ವಿ ಸೂರ್ಯ ಕಾರು ಬಿಟ್ಟು ಬಿಡಲಿ. ನಿನಗೆ ಮದುವೆ ಆಗುವ ಮುನ್ನ ಹೊಸ ಕಾರು ಏಕೆ ಬೇಕಾಗಿತ್ತು? ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಬೆಂಗಳೂರಿನ ಸಸ್ಯಕಾಶಿಗೆ ಗುಂಡಿ ತೋಡುವ ಕೆಲಸ ಮಾಡುತ್ತಿದೆ ; ಆರ್. ಅಶೋಕ್ ಕಿಡಿ



















