ನವದೆಹಲಿ: ರಾಜ್ಯದ ನಂದಿನಿ ಹಾಲು ರಾಷ್ಟ್ರ ರಾಜಧಾನಿ ಪ್ರವೇಶ ಮಾಡಿದ್ದು, ಕರುನಾಡು ಹೆಮ್ಮೆ ಪಡುವಂತಾಗಿದೆ. ದೆಹಲಿಯಲ್ಲಿ ಕೆಎಂಫ್ ಹಾಲು ಉತ್ಪನ್ನ ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ವೇಳೆ ಮತಾನಾಡಿದ ಅವರು, ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹಿಂದೆ ನಾನು ಪಶು ಸಂಗೋಪನಾ ಸಚಿವನಾಗಿದ್ದೆ ಮತ್ತು ಒಂದು ವರ್ಷ ಕೆಎಂಎಫ್ ಅಧ್ಯಕ್ಷನೂ ಆಗಿದ್ದೆ. ಆ ವೇಳೆ ನಾನು ಹಾಲು ಉತ್ಪಾದಕರ ಸಮಸ್ಯೆ ಅರಿತು ಶಾಶ್ವತ ಮಾರುಕಟ್ಟೆ ರಚಿಸಲು ಮುಂದಾದೆ ಎಂದಿದ್ದಾರೆ.
ರಾಜ್ಯದಲ್ಲಿ ಈಗ ಪ್ರತಿ ದಿನ 93 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ರೈತರಿಂದ 32 ರೂ.ಗೆ ಲೀಟರ್ ಹಾಲು ಖರೀದಿಸಲಾಗುತ್ತಿದ್ದು, ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ ನಂತರ 3 ರೂ. ಆಯಿತು. ನಾನು ಈಗ 5 ರೂ.ಗೆ ಏರಿಕೆ ಮಾಡಿದ್ದೇನೆ ಎಂದಿದ್ದಾರೆ.
ಮುಂದಿನ ಆರು ತಿಂಗಳು ಪ್ರತಿ ದಿನ 5 ಲಕ್ಷ ಲೀ. ಹಾಲು ಮಾರಾಟ ಮಾಡಲು ಕೆಎಂಎಫ್ ಗುರಿ ಹಾಕಿಕೊಂಡಿದೆ. ಈಗಾಗಲೇ ಅಲ್ಲಿನ ಮಾರುಕಟ್ಟೆಯಲ್ಲಿ ಹಲವಾರು ಹಾಲಿನ ಬ್ರ್ಯಾಂಡ್ ಗಳಿವೆ. ಆದರೆ, ಕರುನಾಡ ನಂದಿನಿಗೆ ಕೂಡ ಬೇಡಿಕೆ ಬಂದಿದ್ದು, ನಂದಿನಿ ಕಮಾಲ್ ಮಾಡಲು ಮುಂದಾಗಿದೆ.
ದೇಶದಲ್ಲಿ ಅಮುಲ್ ನಂತರದ ಸ್ಥಾನದಲ್ಲಿರುವ ಕರ್ನಾಟಕದ ಕೆಎಂಎಫ್ ಈಗ ಮಂಡ್ಯ ಜಿಲ್ಲಾ ಹಾಲು ಸಹಕಾರ ಒಕ್ಕೂಟದಿಂದ ದೆಹಲಿ, ಹರಿಯಾಣ ಸೇರಿದಂತೆ ಹಲವು ಪ್ರದೇಶಗಳಿಗೆ ಹಾಲು ತಲುಪಿಸಲು ಮುಂದಾಗಿದೆ. ಅಲ್ಲದೇ, ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಸಹ ಆರಂಭಿಸಿದೆ.