ದಾವಣಗೆರೆ: ಕೋರ್ಟ್ ಒಳಗಡೆಯೇ ಗಂಡ ತನ್ನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ನಗರದ ಕೌಟುಂಬಿಕ ಕೋರ್ಟ್ ಆವರಣದಲ್ಲಿ ನಡೆದಿದೆ.
30 ವರ್ಷದ ಪವಿತ್ರಾ ಮೇಲೆ ಪತಿ ಪ್ರವೀಣ್ ಕುಮಾರ್ ಚಾಕು ಇರಿದಿದ್ದಾನೆ. ಬಳಿಕ ತಾನೂ ಕೂಡ ಚಾಕುವಿನಿಂದ ಇರಿದುಕೊಂಡಿದ್ದಾನೆ. ಪವಿತ್ರಾ- ಪ್ರವೀಣ್ ಇಬ್ಬರೂ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದರು.
ಪತ್ನಿ ನಡತೆ ಮೇಲೆ ಆಗಾಗ ಶಂಕೆ ವ್ಯಕ್ತಪಡಿಸುತ್ತಿದ್ದ ಪತಿ ಪ್ರವೀಣ್, ಪದೇಪದೆ ಅನುಮಾನ ಪಡುತ್ತಿದ್ದರಿಂದ ಕೆಲ ದಿನಗಳ ಹಿಂದೆ ಪತಿಯನ್ನು ತೊರೆದಿದ್ದ ಪವಿತ್ರಾ, ದಾಂಪತ್ಯದಲ್ಲಿ ಕಲಹ ಹಿನ್ನೆಲೆ ಇಬ್ಬರೂ ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿ ಹಾಕಿದ್ದರು. ವಿಚಾರಣೆಗೆ ಕೋರ್ಟ್‌ಗೆ ಆಗಮಿಸಿದ್ದಾಗ ಏಕಾಏಕಿ ಪತಿ ಪ್ರವೀಣ್ ಕುಮಾರ್ ಪತ್ನಿ ಪವಿತ್ರಾಗೆ ಚಾಕು ಇರಿದಿದ್ದಾನೆ.
ಚಾಕು ಇರಿದಿದ್ದರಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾನೂ ಚಾಕು ಇರಿದುಕೊಂಡಿದ್ದರಿಂದ ಪ್ರವೀಣ್‌ಗೂ ಕೂಡ ಚಿಕಿತ್ಸೆ ಕೊಡಿಸಲಾಗುತ್ತಿದೆ ಸದ್ಯ ಆರೋಪಿ ಪ್ರವೀಣ್ ಕುಮಾರ್ ವಿರುದ್ಧ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಿದ್ದಾರೆ.