ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯನ್ನು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿ ಬಚಾವಾಗಲು ಯತ್ನಿಸಿ, ಪೊಲೀಸ್ ಬಲೆಗೆ ಬಿದ್ಧ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಯಲಹಂಕದ ಬೊಮ್ಮಸಂದ್ರದ ನಿವಾಸಿ ಅನಂತ್ (64) ತನ್ನ ಪತ್ನಿಯನ್ನು ಕೊಂದ ಆರೋಪಿ. ಗಾಯತ್ರಿ (50) ಕೊಲೆಯಾದ ಮಹಿಳೆ. ಪತ್ನಿಯನ್ನು ಸೈಟ್ ನೋಡಲೆಂದು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಸೈಟ್ನಲ್ಲಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ನಂತರ ಗಾಯತ್ರಿ ಅಪಘಾತಕ್ಕೆ ಒಳಗಾಗಿದ್ದಾರೆ ಎಂಬಂತೆ ನಾಟಕವಾಡಿ ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಚಿಕ್ಕಜಾಲ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆಗ ಅವರಿಗೆ ಇದು ಅಪಘಾತವಲ್ಲ ಎಂಬುದು ಅರಿವಿಗೆ ಬಂದಿದೆ. ಕೊಲೆ ಅನುಮಾನ ವ್ಯಕ್ತವಾಗಿದೆ. ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಗಾಯತ್ರಿಯ ಗಾಯಗಳ ಸ್ವರೂಪ ಪರಿಶೀಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಬಾಗಲೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ಎಂಬುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಅನಂತ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಪತ್ನಿಯ ಕೊಲೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: Celebrate responsibly | ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸರ ವಿನೂತನ ಅಭಿಯಾನ!



















