ಬೆಂಗಳೂರು: ವಯಸ್ಸಾದ ವೃದ್ಧರೊಬ್ಬರ ಮೇಲೆ ಗಂಡ- ಹೆಂಡತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬಿಎಂಟಿಸಿ ಬಸ್ ನಲ್ಲಿ ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣದ ಬಳಿ ಈ ಘಟನೆ ಮಂಗಳವಾರ ನಡೆದಿದೆ. ನಿಗದಿತ ಸ್ಟಾಪ್ ಬಂತು ಬಸ್ ನಿಲ್ಲಿಸಿ ಎಂದು ಚಾಲಕನನ್ನು ಹಿರಿಯ ವ್ಯಕ್ತಿ ಕೇಳಿದ್ದರು. ಆದರೆ, ಚಾಲಕ ಬಸ್ ನಿಲ್ಲಿಸಿರಲಿಲ್ಲ. ವೃದ್ಧ ವ್ಯಕ್ತಿ ಪರಿಪರಿಯಾಗಿ ಕೇಳಿಕೊಂಡರೂ ಬಸ್ ಚಾಲಕನು ಬಸ್ ನಿಲ್ಲಿಸಿಲ್ಲ ಎನ್ನಲಾಗಿದೆ.
ಈ ವೇಳೆ ಚಾಲಕ ಬೆನ್ನಿಗೆ ನಿಂತು ಹಿರಿಯ ವ್ಯಕ್ತಿಯ ಮೇಲೆ ಗಂಡ- ಹೆಂಡತಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿದ್ದ ಗಂಡ-ಹೆಂಡತಿ ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ವಯಸ್ಸಾದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಮುಖಕ್ಕೆ ರಕ್ತ ಬರುವ ಹಾಗೆ ಲೇಡಿ ಡಾನ್ ಮತ್ತು ಆಕೆ ಗಂಡ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸುವ ವಿಡಿಯೋವನ್ನು ಬಸ್ ನಲ್ಲಿದ್ದ ಯುವತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಪೊಲೀಸರಿಗೂ ಈ ಕುರಿತು ಯುವತಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.