ಹರಾರೆ: ಜಿಂಬಾಬ್ವೆ ವಿರುದ್ಧ ಭಾರತೀಯ ಪಡೆ ಭರ್ಜರಿ ಜಯ ಸಾಧಿಸಿದೆ.
ನಾಯಕ ಶುಭಮನ್ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್ ಸ್ಫೋಟಕ ಆಟ ಮತ್ತು ಬೌಲರ್‌ಗಳ ಸಂಘಟಿತ ಪ್ರಯತ್ನದಿಂದಾಗಿ ಜಿಂಬಾಬ್ವೆ (Zimbabwe) ವಿರುದ್ಧದ ಮೂರನೇ ಟಿ20 (T20) ಪಂದ್ಯವನ್ನು ಭಾರತ (Team India) 23 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 4 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತ್ತು. ಕಠಿಣ ಸವಾಲು ಬೆನ್ನಟ್ಟಿದ್ದ ಜಿಂಬಾಬ್ವೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಜಿಂಬಾಬ್ವೆ ಪರ ಡಿಯೋನ್ ಮೈಯರ್ಸ್ ಔಟಾಗದೇ 65 ರನ್ (49 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದರೆ ಕ್ಲೈವ್ ಮದಂಡೆ 37 ರನ್ (26 ಎಸೆತ, 2 ಬೌಂಡರಿ, 2 ಸಿಕ್ಸರ್) ಗಳಿಸಿದರು. ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್, ಅವೇಶ್ ಖಾನ್ 2 , ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಭಾರತದ ಪರ ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ನಾಯಕ ಶುಭಮನ್ ಗಿಲ್ (Shubman Gill) 67 ರನ್ ಗಳ ಜೊತೆಯಾಟವಾಡಿದರು. ಜೈಸ್ವಾಲ್ 36 ರನ್(27 ಎಸೆತ, 4 ಬೌಂಡರಿ, 2 ಸಿಕ್ಸರ್), ಶುಭಮನ್ ಗಿಲ್ 66 ರನ್(49 ಎಸೆತ, 7 ಬೌಂಡರಿ, 3 ಸಿಕ್ಸ್) ಗಾಯಕ್ವಾಡ್ 49 ರನ್ (28 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಮೊದಲ ಪಂದ್ಯವನ್ನು ಜಿಂಬಾಬ್ವೆ ಗೆದ್ದಿದ್ದರೆ, 2ನೇ ಪಂದ್ಯವನ್ನು ಭಾರತ 100 ರನ್‌ಗಳಿಂದ ಗೆದ್ದುಕೊಂಡಿತ್ತು. ನಾಲ್ಕನೇ ಟಿ20 ಪಂದ್ಯ ಶನಿವಾರ ನಡೆಯಲಿದೆ.