ಪ್ರಯಾಗ್‌ರಾಜ್: ಫೆಬ್ರವರಿ 12ರ ಬುಧವಾರ ಮಾಘ ಪೂರ್ಣಿಮೆಯ ಪುಣ್ಯಸ್ನಾನ ನೆರವೇರಲಿದ್ದು, ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ಲಕ್ಷಾಂತರ ಜನರು ಹರಿದುಬರಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವತಯಾರಿ ಮಾಡಿಕೊಂಡಿರುವ ಉತ್ತರಪ್ರದೇಶ ಸರ್ಕಾರ, ಮಹಾಕುಂಭ ಪ್ರದೇಶಕ್ಕೆ ಮಂಗಳವಾರ ಮುಂಜಾನೆ 4 ಗಂಟೆಯಿಂದಲೇ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಸಂಜೆ 5ರಿಂದ ಈ ನಿರ್ಬಂಧವು ಇಡೀ ಪ್ರಯಾಗ್‌ರಾಜ್‌ಗೆ ಅನ್ವಯವಾಗಲಿದೆ.
ಪ್ರಯಾಗ್‌ರಾಜ್‌ನ ಸಂಗಮದ ತೀರದಲ್ಲಿ ಮಹಾಕುಂಭಮೇಳದ ಸಮಯದಲ್ಲಿ ಯಾರು ‘ಕಲ್ಪವಾಸ್’ ವ್ರತ ಕೈಗೊಳ್ಳುತ್ತಾರೋ ಅವರು ಸಾವಿರಾರು ವರ್ಷಗಳ ತಪಸ್ಸಿನ ಫಲ ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಸಂಪ್ರದಾಯದ ಪ್ರಕಾರ, ಮಾಘ ಪೂರ್ಣಿಮೆ(ಫೆ.12)ಯ ದಿನದಂದು ಕಲ್ಪವಾಸ್ ಕೊನೆಯಾಗುತ್ತದೆ. ಹೀಗಾಗಿ ಎಲ್ಲ ಕಲ್ಪವಾಸಿಗಳು ಅಂದರೆ ವ್ರತ ಕೈಗೊಂಡವರು ಬುಧವಾರ ಪೂರ್ಣಿಮ ತಿಥಿಯಂದು ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ತಮ್ಮ ವ್ರತ ಪೂರೈಸುತ್ತಾರೆ. ಇದರ ಜೊತೆಗೆ ಪುಣ್ಯಸ್ನಾನದ ದಿನವಾಗಿರುವ ಹಿನ್ನೆಲೆಯಲ್ಲಿ ಮಹಾಕುಂಭಮೇಳಕ್ಕೆ ಭಾರೀ ಸಂಖ್ಯೆಯ ಜನರು ದೇಶದ ಮೂಲೆ ಮೂಲೆಗಳಿಂದಲೂ ಹರಿದುಬರಲಾರಂಭಿಸಿದ್ದಾರೆ. ಪರಿಣಾಮ 300 ಕಿ.ಮೀ.ಗೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗಿದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಉತ್ತರಪ್ರದೇಶ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಪ್ರಯಾಗ್‌ರಾಜ್‌ನ ಹೊರಗಿನಿಂದ ಬರುವ ಎಲ್ಲ ಯಾತ್ರಿಗಳ ಖಾಸಗಿ ಮತ್ತು ಸಾರ್ವಜನಿಕ ವಾಹನಗಳು ಬೆಳಗ್ಗೆ 4ರಿಂದ ನಿರ್ದಿಷ್ಟ ಪಾರ್ಕಿಂಗ್ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ನಗರದಲ್ಲಿ ದಟ್ಟಣೆ ಸಮಸ್ಯೆ ಎದುರಾಗದಂತೆ ಮತ್ತು ಸ್ನಾನ ಘಟ್ಟಗಳಿಗೆ ಜನರು ಸರಾಗವಾಗಿ ಸಾಗುವಂತೆ ಮಾಡಲಾಗುತ್ತಿದೆ.
ಇಡೀ ಪ್ರಯಾಗ್‌ರಾಜ್ ನಗರವನ್ನು ಸಂಜೆ 5ರಿಂದ ವಾಹನಮುಕ್ತ ವಲಯ ಎಂದು ಘೋಷಿಸಲಾಗುತ್ತಿದೆ. ತುರ್ತು ಸೇವೆಗಳಿಗೆ ಮಾತ್ರ ವಿನಾಯ್ತಿ ನೀಡಲಾಗಿದೆ. ಫೆ.12ರ ಬುಧವಾರದವರೆಗೂ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ. ಮಾಘ ಪೂರ್ಣಿಮೆ ಸ್ನಾನ ಮುಗಿಯುವವರೆಗೂ ವಿಶೇಷ ಟ್ರಾಫಿಕ್ ಯೋಜನೆ ಚಾಲ್ತಿಯಲ್ಲಿರಲಿದೆ.
ಕಲ್ಪವಾಸ್ ವ್ರತ ಕೈಗೊಂಡವರು, ತಾತ್ಕಾಲಿಕ ಟೆಂಟ್‌ನಲ್ಲಿ ವಾಸಿಸುವವರಿಗೂ ಈ ನಿಯಮ ಅನ್ವಯವಾಗುತ್ತದೆ.
ಇದೇ ವೇಳೆ, ಮಹಾಕುಂಭಮೇಳ ಪ್ರದೇಶದಲ್ಲಿ ಹೆಚ್ಚಿನ ಆಡಳಿತಾತ್ಮಕ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ. 3 ಐಎಎಸ್ ಅಧಿಕಾರಿಗಳು 25 ಪಿಸಿಎಸ್ ಅಧಿಕಾರಿಗಳು ಎಲ್ಲ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ. ಭಕ್ತಾದಿಗಳ ಅನುಕೂಲಕ್ಕಾಗಿ 28 ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಕೂಡಲೇ ಮೇಳ ಪ್ರದೇಶಕ್ಕೆ ಆಗಮಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಎಲ್ಲ ದಿಕ್ಕುಗಳಿಂದಲೂ ಭಕ್ತರು ಆಗಮಿಸುತ್ತಿರುವ ಕಾರಣ ಎಲ್ಲೂ ಸಂಚಾರ ದಟ್ಟಣೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.