ಬೆಂಗಳೂರು: ವಿದೇಶ ಪ್ರವಾಸಕ್ಕೆ ಹೋಗುವವರು ಮಾತ್ರವಲ್ಲ, ದೇಶದ ಪ್ರಮುಖ ಗುರುತಿನ ಚೀಟಿಯನ್ನಾಗಿಯೂ ಪಾಸ್ ಪೋರ್ಟ್ ಅನ್ನು ಬಳಸಲಾಗುತ್ತದೆ. ಈಗ ಬಹುತೇಕ ದಾಖಲೆಗಳು ಡಿಜಿಟಲ್ ಆಗುತ್ತಿರುವ ಕಾರಣ ಕೇಂದ್ರ ಸರ್ಕಾರವು ಪಾಸ್ ಪೋರ್ಟ್ ಗಳನ್ನೂ ಡಿಜಿಟಲೀಕರಣ ಮಾಡಿದೆ. ಹಾಗಾಗಿ, ಜನ ಈಗ ಇ-ಪಾಸ್ ಪೋರ್ಟ್ ಗಳನ್ನು ಕೂಡ ಪಡೆಯಬಹುದಾಗಿದೆ. ಇವು ಭೌತಿಕ ಪಾಸ್ ಪೋರ್ಟ್ ಗಳಷ್ಟೇ ಮಾನ್ಯವಾಗಿವೆ. ಅಲ್ಲದೆ, ಹೆಚ್ಚು ಸುರಕ್ಷಿತವಾಗಿವೆ.
ಹಾಗಾಗಿ, ಈ ಪಾಸ್ ಪೋರ್ಟ್ ಗಳನ್ನು ಈಗ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಇ- ಪಾಸ್ ಪೋರ್ಟ್ ಇಟ್ಟುಕೊಂಡೇ ವಿದೇಶ ಪ್ರವಾಸಕ್ಕೂ ಹೋಗಬಹುದಾಗಿದೆ. ಸದ್ಯ, ಇ-ಪಾಸ್ಪೋರ್ಟ್ ಸೌಲಭ್ಯವನ್ನು ದೇಶದ ಆಯ್ದ ಪಾಸ್ಪೋರ್ಟ್ ಸೇವಾ ಕೇಂದ್ರಗಳು ಮತ್ತು ಅಂಚೆ ಕಚೇರಿ ಪಾಸ್ಪೋರ್ಟ್ ಸೇವಾ ಕೇಂದ್ರಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಹಾಗಾಗಿ, ಅಪಾಯಿಂಟ್ ಮೆಂಟ್ ಬುಕ್ ಮಾಡುವ ಮೊದಲು, ಹತ್ತಿರದ ಕಚೇರಿಯಲ್ಲಿ ಇ-ಪಾಸ್ ಪೋರ್ಟ್ ಸೇವೆ ಸೌಲಭ್ಯವಿದೆಯೇ ಎಂದು ಅರ್ಜಿದಾರರು ಪರಿಶೀಲನೆ ಮಾಡಿಕೊಳ್ಳುವುದು ಒಳಿತು.
ಅರ್ಜಿ ಸಲ್ಲಿಸುವುದು ಹೇಗೆ?
ಆನ್ ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇಡೀ ಪ್ರಕ್ರಿಯೆಯು ಸಾಮಾನ್ಯ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿದ ರೀತಿಯೇ ಇರುತ್ತದೆ. ಪರಿಶೀಲನಾ ಹಂತದವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲು passportindia.gov.in ಗೆ ಲಾಗಿನ್ ಆಗಬೇಕು. ಹೊಸ ಇ-ಪಾಸ್ ಪೋರ್ಟ್ ಗಾಗಿ ಅರ್ಜಿಯನ್ನು ಭರ್ತಿ ಮಾಡಬೇಕು.ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಶುಲ್ಕ ಪಾವತಿಸಿದ ಬಳಿಕ ಅಪಾಯಿಂಟ್ ಮೆಂಟ್ ಬುಕ್ ಮಾಡಬೇಕು.
ಇದಾದ ಬಳಿಕ ಫಿಂಗರ್ ಪ್ರಿಂಟ್, ಫೇಸ್ ರೆಕಗ್ನಿಷನ್ ಹಾಗೂ ದಾಖಲೆ ಪರಿಶೀಲನೆಗಾಗಿ ಕೇಂದ್ರಕ್ಕೆ ಭೇಟಿ ನೀಡಬೇಕು. ನಂತರ ಆನ್ ಲೈನ್ ನಲ್ಲಿ ಅರ್ಜಿ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಸಾಮಾನ್ಯ ಪ್ರಕ್ರಿಯೆ ಅನ್ವಯ, ಇ-ಪಾಸ್ ಪೋರ್ಟ್ ಸಾಮಾನ್ಯವಾಗಿ 30 ರಿಂದ 45 ದಿನಗಳಲ್ಲಿ ಅಂಚೆ ಮೂಲಕ ಕಾಯಂ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಎಷ್ಟು ಶುಲ್ಕ?
ಭಾರತದಲ್ಲಿ ಇ-ಪಾಸ್ ಪೋರ್ಟ್ ಗೆ ಇರುವ ಶುಲ್ಕಗಳು ಸಾಮಾನ್ಯ ಪಾಸ್ ಪೋರ್ಟ್ ಗೆ ಸಮನಾಗಿವೆ. 36 ಪುಟಗಳ ಬುಕ್ ಲೆಟ್ ಗೆ 1,500 ರೂಪಾಯಿ ನಿಗದಿಪಡಿಸಲಾಗಿದೆ. ತತ್ಕಾಲ್ ಆದರೆ 3,500 ರೂಪಾಯಿ ಆಗುತ್ತದೆ. ಅದೇ ರೀತಿ, 60 ಪುಟಗಳ ಬುಕ್ ಲೆಟ್ ಗೆ 2,000 ರೂಪಾಯಿ (ತತ್ಕಾಲ್ 4000 ರೂಪಾಯಿ) ಆಗುತ್ತದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾನ್ಯ ಪಾಸ್ ಪೋರ್ಟ್ ಶುಲ್ಕ ಒಂದು ಸಾವಿರ ರೂಪಾಯಿ ಇದೆ. ತತ್ಕಾಲ್ ಶುಲ್ಕವು ಸಾಮಾನ್ಯ ಪಾಸ್ ಪೋರ್ಟ್ ಗೆ ಇರುವಷ್ಟೇ ಇದೆ. ಇದು ಸುಧಾರಿತ ತಂತ್ರಜ್ಞಾನ ಹೊಂದಿದೆ. ಚಿಪ್ ನಲ್ಲಿನ ಡೇಟಾ ಎನ್ಕ್ರಿಪ್ಟ್ ಆಗಿರುವುದರಿಂದ ನಕಲಿ ಅಥವಾ ದುರುಪಯೋಗ ಮಾಡಲು ಸಾಧ್ಯವಿಲ್ಲ.
ಇದನ್ನೂ ಓದಿ; ಗ್ರಾಕ್ ಎಐ ಅಶ್ಲೀಲ ಚಿತ್ರ ವಿವಾದ | ಕೇಂದ್ರದ ಎಚ್ಚರಿಕೆ ಬೆನ್ನಲ್ಲೇ ಸಾವಿರಾರು ಪೋಸ್ಟ್, ನೂರಾರು ಖಾತೆ ಡಿಲೀಟ್


















