ಬೆಂಗಳೂರು: ನಮಗೊಂದು ಸ್ವಂತ ಸೂರು ಇರಬೇಕು ಎಂದು ಸಾಲ ಮಾಡಿ ಮನೆ ಕಟ್ಟಿಸಿರುತ್ತೇವೆ. ಅಪಾರ್ಟ್ ಮೆಂಟ್ ಖರೀದಿಸಿರುತ್ತೇವೆ. ಆದರೆ, ಸಾಲ ಮಾಡುವಾಗ ಕಡಿಮೆ ಸಂಬಳ ಇರುತ್ತದೆ ಎಂದೋ 50 ಲಕ್ಷ ರೂಪಾಯಿ ಸಾಲಕ್ಕೆ 30 ವರ್ಷಗಳನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಆದರೆ, ಈಗ ಸಂಬಳ ಹೆಚ್ಚಾಗಿದೆ. ಸಾಲವನ್ನು ಕಡಿಮೆ ಅವಧಿಗೆ ಹೇಗೆ ತೀರಿಸುವುದು ಎಂಬ ಯೋಚನೆ ಇದೆಯೇ? ಅದಕ್ಕೆ ನಾವಿಲ್ಲಿ ಪರಿಹಾರ ನೀಡಿದ್ದೇವೆ.
ನೀವು, 30 ವರ್ಷಗಳವರೆಗೆ ಇಎಂಐ ಆಯ್ಕೆ ಮಾಡಿಕೊಂಡು 50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಶೇ.9.5ರ ಬಡ್ಡಿದರದಲ್ಲಿ ನೀವು ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ, ತಿಂಗಳಿಗೆ ನೀವು ಇಎಂಐನಲ್ಲಿ 1,642 ರೂಪಾಯಿಯನ್ನು ಹೆಚ್ಚು ಕಟ್ಟಿದರೂ ಸಾಕು, ನೀವು 25 ವರ್ಷಕ್ಕೇ ಸಾಲ ತೀರಿಸುತ್ತೀರಿ. ಅಲ್ಲದೆ, ನಿಮಗೆ 20 ಲಕ್ಷ ರೂಪಾಯಿ ಕೂಡ ಉಳಿಯುತ್ತದೆ.
30 ವರ್ಷಗಳ ಅವಧಿಗೆ ಮಾಸಿಕ ಇಎಂಐ ಸುಮಾರು 42,043 ರೂಪಾಯಿ ಆಗಿದ್ದರೆ, ಒಟ್ಟು ಬಡ್ಡಿ 1,01,35,376 ರೂಪಾಯಿ ಆಗುತ್ತದೆ. ಅವಧಿಯನ್ನು 25 ವರ್ಷಗಳಿಗೆ ಕಡಿಮೆ ಮಾಡಿದರೆ, ಇಎಂಐ 43,685 ರೂಪಾಯಿ (ಕೇವಲ ರೂ 1,642 ಹೆಚ್ಚು) ಆಗುತ್ತದೆ. ಆದರೆ, ಪಾವತಿಸುವ ಒಟ್ಟು ಬಡ್ಡಿಯು 1,31,05,450 ರೂಪಾಯಿಗೆ ಇಳಿಯುತ್ತದೆ.
9.50% ಬಡ್ಡಿ ದರದಲ್ಲಿ 50 ಲಕ್ಷ ರೂ. ಸಾಲಕ್ಕೆ 25 ವರ್ಷಗಳ ಅಂದಾಜು ಮಾಸಿಕ ಇಎಂಐ ರೂ 43,685 ಆಗಿರುತ್ತದೆ. 25 ವರ್ಷಗಳಲ್ಲಿ ಪಾವತಿಸುವ ಒಟ್ಟು ಬಡ್ಡಿ ರೂ 81,05,450 ಆಗಿದ್ದರೆ, ಒಟ್ಟು ಮರುಪಾವತಿ ಮೊತ್ತ ರೂ 1,31,05,450 ಆಗಿರುತ್ತದೆ. ಮಾಸಿಕ ಇಎಂಐ ಹೆಚ್ಚಳದಿಂದಾಗಿ ಅಂದಾಜು ಉಳಿತಾಯವಾಗುವ ಮೊತ್ತ ಸುಮಾರು 20,29,926 ರೂಪಾಯಿ. ಇದರ ಜತೆಗೆ, 5 ವರ್ಷ ಮೊದಲೇ ಸಾಳವನ್ನು ಮರುಪಾವತಿ ಮಾಡಬಹುದು.