ಬೆಂಗಳೂರು: ಆನ್‌ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ನಿಮ್ಮ ಹಣ ದುಪ್ಪಟ್ಟು ಮಾಡುತ್ತೇವೆ ಎಂದೋ, ಒಳ್ಳೆಯ ರಿಟರ್ನ್ಸ್ ಕೊಡಿಸುತ್ತೇವೆ ಎಂದು ಜನರ ಕೋಟ್ಯಂತರ ರೂಪಾಯಿಯನ್ನು ವಂಚಿಸಲಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಜನ ವಂಚನೆಗೊಳಗಾಗುತ್ತಿದ್ದಾರೆ. ಇದನ್ನು ತಡೆಯಲು ಆರ್ ಬಿಐ ಈಗ ಸಚೇತ್ ಎಂಬ ಪೋರ್ಟಲ್ (Sachet Portal) ಆರಂಭಿಸಿದೆ. ಇದರಿಂದ ಜನ ಆನ್ ಲೈನ್ ವಂಚನೆಗೊಳಗಾದರೆ ಕೂಡಲೇ ದೂರು ದಾಖಲಿಸಬಹುದಾಗಿದೆ. ಹಾಗೆಯೇ, ನಿಮಗೆ ಯಾವುದಾದರೂ ಕಂಪನಿ ಹೆಸರಿನಲ್ಲಿ ಕರೆ ಮಾಡಿದರೆ, ಆ ಕಂಪನಿ ಅಧಿಕೃತವೋ, ಅಲ್ಲವೋ ಎಂಬುದನ್ನು ಕೂಡ ತಿಳಿಯಬಹುದಾಗಿದೆ.
ಏನಿದು ಸಚೇತ್ ಪೋರ್ಟಲ್?
ಆರ್ ಬಿಐನ ಸಚೇತ್ ಪೋರ್ಟಲ್ ಒಂದು ಆನ್ ಲೈನ್ ವೇದಿಕೆಯಾಗಿದೆ. ನಕಲಿ ಹೂಡಿಕೆ ಯೋಜನೆಗಳು, ಕಾನೂನುಬಾಹಿರ ಚಿಟ್ ಫಂಡ್ ಗಳು ಮತ್ತು ಅನಧಿಕೃತ ಹಣಕಾಸು ಕಂಪನಿಗಳಿಂದ ಸಾಮಾನ್ಯ ಜನರನ್ನು ರಕ್ಷಿಸಲು ಇದನ್ನು ರಚಿಸಲಾಗಿದೆ. ಅವಾಸ್ತವಿಕ ಆದಾಯದ (ಉದಾಹರಣೆಗೆ ಪ್ರತಿ ತಿಂಗಳು ಹಣ ದ್ವಿಗುಣಗೊಳಿಸುವುದು ಅಥವಾ 20% ರಿಟರ್ನ್ಸ್ ಖಾತರಿಯ ಹೂಡಿಕೆ) ಭರವಸೆ ನೀಡಿ ವಂಚಿಸಿದ ಯಾವುದೇ ಕಂಪನಿ ಅಥವಾ ಯೋಜನೆಯ ವಿರುದ್ಧ ನೀವು ಈ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು.
ಆನ್ ಲೈನ್ ದೂರು ದಾಖಲಿಸುವುದು ಹೇಗೆ?
ನೀವು ಯಾವುದೇ ನಕಲಿ ಹೂಡಿಕೆ ಯೋಜನೆಗೆ ಬಲಿಯಾಗಿದ್ದರೆ, ಕೆಲವೇ ಸರಳ ಹಂತಗಳಲ್ಲಿ ಆನ್ ಲೈನ್ ಮೂಲಕ ದೂರು ದಾಖಲಿಸಬಹುದು.
- ಮೊದಲು ಆರ್ ಬಿಐನ ಸಚೇತ್ ಪೋರ್ಟಲ್ https://sachet.rbi.org.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ (Homepage) “File a Complaint” ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ದೂರಿನ ವಿವರಗಳನ್ನು ಅಂದರೆ ಕಂಪನಿಯ ಹೆಸರು, ಯೋಜನೆಯ ಮಾಹಿತಿ ಮತ್ತು ಎಷ್ಟು ಹಣ ಹೂಡಿಕೆ ಮಾಡಲಾಗಿದೆ ಎಂಬ ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ದೂರು ಯಾವ ನಿಯಂತ್ರಕ ಸಂಸ್ಥೆಯ (Regulator) ವ್ಯಾಪ್ತಿಗೆ ಬರುತ್ತದೆ ಎಂದು ನಿಮಗೆ ತಿಳಿಯದಿದ್ದರೆ, “Can’t find regulator” ಎಂಬುದರ ಮೇಲೆ ಕ್ಲಿಕ್ ಮಾಡಿ.
- ದೂರು ದಾಖಲಿಸುವಾಗ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ, ಇದರಿಂದ ನಿಮಗೆ ಎಸ್ಎಂಎಸ್ ಮೂಲಕ ಅಪ್ಡೇಟ್ಗಳು ಸಿಗುತ್ತವೆ.
- ದೂರು ದಾಖಲಾದ ನಂತರ, ಮುಂದಿನ ಕ್ರಮಕ್ಕಾಗಿ ಆರ್ ಬಿಐ ಆ ವಿಷಯವನ್ನು ಸೆಬಿ (SEBI), ಐಆರ್ಡಿಎಐ (IRDAI), ರಾಜ್ಯ ಸರ್ಕಾರ ಅಥವಾ ಪೊಲೀಸ್ ಇಲಾಖೆಯಂತಹ ಸೂಕ್ತ ಪ್ರಾಧಿಕಾರಕ್ಕೆ ರವಾನಿಸುತ್ತದೆ.
ದೂರು ದಾಖಲಾದ ನಂತರ ನಿಮಗೆ ಒಂದು ಉಲ್ಲೇಖ ಸಂಖ್ಯೆ (Reference Number) ಸಿಗುತ್ತದೆ. ಈ ಸಂಖ್ಯೆಯ ಮೂಲಕ ನಿಮ್ಮ ದೂರಿನ ಸ್ಥಿತಿಯನ್ನು ಆನ್ ಲೈನ್ ನಲ್ಲಿ ಟ್ರ್ಯಾಕ್ ಮಾಡಬಹುದು. ಇದಲ್ಲದೆ, ಆರ್ ಬಿಐನ ಎಸ್ ಎಲ್ ಸಿಸಿ (SLCC – ರಾಜ್ಯ ಮಟ್ಟದ ಸಮನ್ವಯ ಸಮಿತಿ) ತಂಡವು ನಿಮ್ಮ ದೂರನ್ನು ಸರಿಯಾದ ಇಲಾಖೆಗೆ ತಲುಪಿಸಲು ಸಹಾಯ ಮಾಡುತ್ತದೆ.
ಆರ್ ಬಿಐ ಹೊರತುಪಡಿಸಿ ಇಲ್ಲಿಯೂ ದೂರು ನೀಡಬಹುದು
ನೀವು ಸೈಬರ್ ವಂಚನೆ ಅಥವಾ ಆನ್ ಲೈನ್ ಮೋಸಕ್ಕೆ ಬಲಿಯಾಗಿದ್ದರೆ, ಕೇವಲ ಆರ್ ಬಿಐ ಮಾತ್ರವಲ್ಲದೆ, ಇತರ ವೇದಿಕೆಗಳಲ್ಲಿಯೂ ದೂರು ದಾಖಲಿಸಬಹುದು. ಸೈಬರ್ ಕ್ರೈಂ ಪೋರ್ಟಲ್, 1930 ಸಹಾಯವಾಣಿ ಸಂಖ್ಯೆ, ದೂರಸಂಪರ್ಕ ಇಲಾಖೆಯ ಚಕ್ಷು ಪೋರ್ಟಲ್ (Chakshu Portal) (ಸ್ಪ್ಯಾಮ್ ಅಥವಾ ನಕಲಿ ಕರೆ/ಸಂದೇಶಗಳ ದೂರಿಗಾಗಿ) ಮೂಲಕವೂ ದೂರು ದಾಖಲಿಸಬಹುದು.
ಇದನ್ನೂ ಓದಿ; ಕೇಂದ್ರ ಸರ್ಕಾರದ CFTRI ಸಂಸ್ಥೆಯಲ್ಲಿ ಒಂದು ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನ | ಮೈಸೂರಿನಲ್ಲೇ ಕೆಲಸ



















