ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ ಭಾರೀ ಯಶಸ್ಸು ಕಂಡಿದೆ. ಅದು ಯಶಸ್ಸು ಕಂಡು ತುಂಬಾ ದಿನಗಳೇ ಕಳಿದಿವೆ. ಅದ್ಯಾಕಪ್ಪ ಈಗ ವಿಷಯ ಅಂತ ಅನಕೊಬೇಡಿ.. ವಿಷಯ ಅದಲ್ಲ. ಬಿಗ್ ಬಾಸ್ ನಡೆಸಿ ಕೊಡುವ ಕಿಚ್ಚ ಸುದೀಪ್ ಬಗ್ಗೆ ಜನರಲ್ಲಿ ಒಂದು ಕುತೂಹಲ ಇಂದಿಗೂ ಉಳಿದಿದೆ. ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಡಲು ಕಿಚ್ಚ ಎಷ್ಟು ಸಂಭಾವನೆ ಪಡೆಯುತ್ತಾರೆ? ಎಂಬ ಕುತೂಹಲ ಜನರಲ್ಲಿ ಉಳಿದೇ ಇದೆ. ಈಗ ನಾವು ಕೂಡ ಅದೇ ವಿಷಯವನ್ನು ಚರ್ಚೆಗೆ ತಂದಿದ್ದೇವೆ.
ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ ಆರಂಭವಾದಾಗಿನಿಂದಲೂ ಕಿಚ್ಚ ನಿರೂಪಣೆಯ ಹೊಣೆ ಹೊತ್ತಿದ್ದಾರೆ. ಅಭಿಮಾನಿಗಳು ಇಂದಿಗೂ ಕಿಚ್ಚನ ನಿರೂಪಣೆಯೇ ಇರಲಿ ಎನ್ನುತ್ತಿದ್ದಾರೆ. ಕಿಚ್ಚನ ಸಂಭಾಷಣೆ, ಪ್ರತಿಕ್ರಿಯೆ, ತಮಾಷೆ ಎಲ್ಲವೂ ಜನರಿಗೆ ತುಂಬಾ ಅಚ್ಚು ಮೆಚ್ಚು. ಆದರೆ, ಈಗ 12ನೇ ಸೀಸನ್ ಗೆ ಕಿಚ್ಚ ಇರುವುದಿಲ್ಲ ಎನ್ನಲಾಗುತ್ತಿದೆ. ಇದಕ್ಕಾಗಿಯೋ ಏನು ಕಿಚ್ಚ ಬಿಗ್ ಬಾಸ್ ಗೆ ಪಡೆಯುತ್ತಿರುವ ಸಂಭಾವನೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರತಿ ಸೀಸನ್ ಗೆ ಕಿಚ್ಚ ಪಡೆಯುತ್ತಿರುವ ಸಂಭಾವನೆ ಎಷ್ಟು?
ಸುದೀಪ್ ಸ್ವತಃ 12ನೇ ಸೀಸನ್ ಅನ್ನು ನಿರೂಪಣೆ ಮಾಡುವುದಿಲ್ಲ ಎಂದು ತಮ್ಮ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ. ಅಂದಿನಿಂದ ಅವರ ಅಭಿಮಾನಿಗಳು ಹಾಗೂ ವೀಕ್ಷಕರು ಕಿಚ್ಚನ ನಿರೂಪಣೆ ಇಲ್ಲದೆ ಬಿಗ್ ಬಾಸ್ ಶೋ ನೋಡುವುದಿಲ್ಲ ಅಂತ ಹಠ ಹಿಡಿದು ಕೂತಿದ್ದಾರೆ. ಅಭಿಮಾನಿಗಳ ಹಠದಿಂದಾಗಿ ಕಿಚ್ಚ ಮತ್ತೆ ಬಿಗ್ ಬಾಸ್ ಆಗುತ್ತಾರಾ ಎಂಬುವುದನ್ನು ಕಾಯ್ದು ನೋಡಬೇಕಿದೆ.
ಕಿಚ್ಚ ಸುದೀಪ್ ಕಳೆದ ಮೂರು ಸೀಸನ್‌ಗೆ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅಂದರೆ, ಕಿಚ್ಚ ಸುದೀಪ್ ಕಳೆದ ಮೂರು ಸೀಸನ್‌ಗಳಲ್ಲಿ ಪ್ರತಿ ಸೀಸನ್‌ಗೆ ಸರಾಸರಿ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬುವುದು ಸಾಮಾಜಿಕ ಜಾಲತಾಣದ ಚರ್ಚೆಯಿಂದ ತಿಳಿದು ಬಂದಿದೆ. ಆದರೆ, ಕಿಚ್ಚ ಸುದೀಪ್ ಆಗಲಿ, ಕಲರ್ಸ್ ಕನ್ನಡ ಆಗಲಿ ಈ ಬಗ್ಗೆ ಅಧಿಕೃತವಾಗಿ ಇದೂವರೆಗೂ ಮಾಹಿತಿ ಹಂಚಿಕೊಂಡಿಲ್ಲ.
ಸುದೀಪ್ ಈಗ ‘ಮ್ಯಾಕ್ಸ್’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಕ್ಸಸ್ ಬೆನ್ನಲ್ಲೇ ಈಗ ‘ಬಿಲ್ಲ ರಂಗ ಬಾಷಾ’ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಆದರೆ, ಬಿಗ್ ಬಾಸ್ ಅಭಿಮಾನಿಗಳ ಕನಸನ್ನು ಕಿಚ್ಚ ನುಚ್ಚು ನೂರು ಮಾಡದಿರಲಿ, ಮತ್ತೆ ಬಿಗ್ ಬಾಸ್ ಆಗಿ ಜನರ ಮುಂದೆ ಬರಲಿ ಎಂಬುವುದು ಅಭಿಮಾನಿಗಳ ಆಶಯವಾಗಿದೆ. ಅಭಿಮಾನಿಗಳ ಕನಸು ಈಡೇರಲಿ ಎಂಬುವುದು ನಮ್ಮ ಬಯಕೆಯಾಗಿದೆ.