ಮಹಾವಿಷ್ಣು ದೇವರ ದೈವ ಸ್ವರೂಪವೇ ಶ್ರೀ ರಂಗನಾಥ ಸ್ವಾಮಿ. ರಂಗ ಅಂದರೆ ಸಭೆ, ನಾಥ ಎಂದರೆ ನೋಡಿಕೊಳ್ಳುವವರು ಎಂದರ್ಥ. ಈ ಜಗತ್ತನ್ನು ನೋಡಿಕೊಳ್ಳುವ ದೇವರೇ ಈ ರಂಗನಾಥ ಸ್ವಾಮಿ ಎಂಬ ನಂಬಿಕೆ ಭಕ್ತರಲ್ಲಿ ಇದೆ. ನಮ್ಮಲ್ಲಿ ಶ್ರೀರಂಗನಾಥ ಸ್ವಾಮಿ ರೂಪದಲ್ಲಿ ವಿಷ್ಣುವಿನ ಆರಾಧನೆ ಮಾಡುವಂತಹ ದೇವಾಲಯಗಳು ಹಲವಾರು ಕಾಣ ಸಿಗುತ್ತವೆ. ಆ ಪೈಕಿ ಮುಖ್ಯ ಪಾತ್ರದಲ್ಲಿ ಇರುವ ದೇವಾಯಗಳೇ ಶ್ರೀರಂಗ ಕ್ಷೇತ್ರಗಳು. ಈ ಕ್ಷೇತ್ರಗಳನ್ನು ಆದಿರಂಗ, ಮಧ್ಯರಂಗ ಹಾಗೂ ಅಂತ್ಯರಂಗ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ.
ಆದಿರಂಗ ಹಾಗೂ ಮಧ್ಯರಂಗಗಳು ನಮ್ಮ ಕರ್ನಾಟಕದಲ್ಲಿ ಇದ್ದರೆ, ಅಂತ್ಯರಂಗ ಕ್ಷೇತ್ರ ಮಾತ್ರ ತಮಿಳುನಾಡಿನಲ್ಲಿದೆ. ಜೀವ ನದಿ ಎನಿಸಿರುವ ಕಾವೇರಿ ನದಿಯು ತಾನು ಹರಿಯುವ ಮಾರ್ಗ ಮಧ್ಯದಲ್ಲಿ ಮೂರು ದ್ವೀಪಗಳನ್ನು ಸೃಷ್ಟಿಸಿದ್ದಾಳೆ. ಆ ಮೂರು ದ್ವೀಪಗಳಲ್ಲಿ ಮಹಾ ವಿಷ್ಣು ದೇವರು ಶ್ರೀರಂಗನಾಥ ಸ್ವಾಮಿಯಾಗಿ ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ. ಬನ್ನಿ ಕರ್ನಾಟಕ ನ್ಯೂಸ್ ಬೀಟ್ ನಿಮಗೆ ಈ ಮೂರು ಪುಣ್ಯ ಕ್ಷೇತ್ರಗಳ ಇಂಟ್ರೆಸ್ಟಿಂಗ್ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ಮಾಡುತ್ತದೆ.
ಮೊದಲನೇಯದಾಗಿ ಆದಿರಂಗ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋಣ. ಈ ಕ್ಷೇತ್ರವೇ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ. ಕರ್ನಾಟಕದ ಅತೀ ದೊಡ್ಡ ದೇವಾಲಯಗಳಲ್ಲಿ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ ಮುಂಚುಣಿಯಲ್ಲಿ ಬರುತ್ತದೆ. ಈ ದೇವಾಲಯವನ್ನು ೯ನೇ ಶತಮಾನದ ಗಂಗರು ನಿರ್ಮಾಣ ಮಾಡಿದ್ದರು. ನಂತರ ವಿಜಯ ನಗರ ಅರಸರು ಹಾಗೂ ಹೊಯ್ಸಳರು ದೇವಾಲಯವನ್ನು ನವೀಕರಿಸಿದ್ದಾರೆ. ಶ್ರೀರಂಗನಾಥ ಸ್ವಾಮಿ ದೇವಾಲಯ ಕಾವೇರಿ ನದಿಯಿಂದ ಸುತ್ತುವರೆದಿದೆ. ಹೀಗಾಗಿಯೇ ಇಲ್ಲಿಗೆ ಬರುವ ಬಹುತೇಕ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿಕೊಂಡು ದೇವರ ದರ್ಶನಕ್ಕೆ ತೆರಳುತ್ತಾರೆ.
ಈ ದೇವಾಲಯದಲ್ಲಿ ಶ್ರೀರಂಗನಾಥ ಸ್ವಾಮಿಯ ಮೂರ್ತಿಯು ತುಂಬಾನೇ ಆಕರ್ಷಕವಾಗಿದೆ. ಏಳು ಹೆಡೆಗಳುಳ್ಳ ಆದಿಶೇಷನ ಮೇಲೆ ಪವಡಿಸುತ್ತ ದರ್ಶನ ನೀಡುತ್ತಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಶ್ರೀರಂಗನಾಥ ಸ್ವಾಮಿ ವಿಗ್ರಹದ ಪಾದಗಳ ಬಳಿ ಒಂದು ಕೈಯಲ್ಲಿ ಕಮಲ ಹಿಡಿದ ಕಾವೇರಿ ಮಾತೆಯ ವಿಗ್ರಹವಿರುವುದು.
ಇನ್ನು ಮಧ್ಯರಂಗ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋಣ. ಈ ಕ್ಷೇತ್ರವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಬಳಿ ಇರುವ ಶಿವನಸಮುದ್ರದಲ್ಲಿದೆ. ಈ ದೇವಾಲಯದಲ್ಲಿ ಶ್ರೀರಂಗನಾಥ ಸ್ವಾಮಿಯ ವಿಗ್ರಹ ತುಂಬಾನೇ ಆಕರ್ಶಕವಾಗಿದೆ. ಹೀಗಾಗಿಯೇ ಭಕ್ತರು ಮೋಹನರಂಗ ನೆಂದೂ ಕರೆಯುತ್ತಾರೆ. ಪುರಾಣದ ಪ್ರಕಾರ ದೇವೇಂದ್ರನಿಗೆ ತಗುಲಿದ ಶಾಪ ವಿಮೋಚನೆಗಾಗಿ ಸಪ್ತ ಋಷಿಗಳ ಸಲಹೆಯ ಮೇರೆಗೆ ಶಿವನಸಮುದ್ರದಲ್ಲಿ ಶ್ರೀರಂಗನಾಥ ಸ್ವಾಮಿಯ ಮೂರ್ತಿ ಸ್ಥಾಪಿಸಿ ಪೂಜೆ ಮಾಡಿದ್ದ. ಸ್ಥಳೀಯರು ಹೇಳೋ ಪ್ರಕಾರ ಈಗಲೂ ಸಪ್ತ ರುಷಿಗಳು ಅಲ್ಲಿಯೇ ಸಮೀಪವಿರುವ ಬರಚುಕ್ಕಿಯ ಜಲದಲ್ಲಿ ಸಂಧ್ಯಾವಂದನೆಯ ಸ್ನಾನ ಪೂರೈಸುತ್ತಾರೆ. ಇದೇ ಕಾರಣಕ್ಕೆ ಶಿವನ ಸಮುದ್ರದ ಕ್ಷೇತ್ರವನ್ನು ಸಪ್ತ ರುಷಿಗಳ ಕ್ಷೇತ್ರ ಅಂತಲೂ ಭಕ್ತರು ಕರೆಯುತ್ತಾರೆ.
ಕೊನೆಯಯದಾಗಿ ಅಂತ್ಯರಂಗದ ಬಗ್ಗೆ ತಿಳಿದುಕೊಳ್ಳೋಣ. ಈ ಕ್ಷೇತ್ರವು ತಮಿಳುನಾಡಿನ ತಿರುಚಲಾಪಲ್ಲಿಯ ಶ್ರೀರಂಗಂನಲ್ಲಿದೆ. ಕ್ಷೇತ್ರದ ಒಂದು ಕಡೆಯ ಕಾವೇರಿ ನಂದಿಯಿಂದ ಸುತ್ತುವರೆದಿದ್ದರೇ, ಇನ್ನೊಂದು ಕಡೆ ಕಾವೇರಿ ನದಿಯ ಉಪ ನದಿಯಾದಂತಹ ಕೊಲ್ಲಿಡಂನಿಂದ ಸುತ್ತುವರೆದಿದೆ. ಈ ದೇವಾಲಯವು ಸುಮಾರು ೧೫೬ ಏಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಭವ್ಯವಾಗಿ ಹರಡಿಕೊಂಡಿದೆ. ಮುಖ್ಯ ದೇವಾಲಯದ ರಾಜ ಗೋಪುರವು ೨೩೬ ಅಡಿಗಳಷ್ಟು ಎತ್ತರವಿದ್ದು, ವಿಶ್ವದಲ್ಲಿಯೇ ಅತೀ ಎತ್ತರದ ಗೋಪುರ ಎಂಬ ಖ್ಯಾತಿ ಪಡೆದಿದೆ. ಈ ದೇವಾಸ್ಥಾನದಲ್ಲಿರುವ ಶ್ರೀರಂಗನಾಥ ಸ್ವಾಮಿ ವಿಗರಹವು ಶ್ರೀಲಂಕಾದೇಶದತ್ತ ಅಂದರೆ ದಕ್ಷಿಣಕ್ಕೆ ಮುಖ ಮಾಡಿದೆ.