ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ, ಕುಲದ ನೆಲೆಯನೆನಾದರೂ ಬಲ್ಲಿರಾ? ಬಲ್ಲಿರಾ? ಎಂದು 15-16ನೇ ಶತಮಾನದಲ್ಲೇ ಜನರನ್ನು ಎಚ್ಚರಿಸಿದ್ದ ಕನಕದಾಸರ ಜಯಂತಿ ಇಂದು. ಅವರ ಆ ಎಚ್ಚರಿಕೆ ಇಂದಿಗೂ ಸಮಾಜದಲ್ಲಿ ಜ್ವಲಂತವಾಗಿದ್ದು, ಜಾತ್ಯಾತೀತ ಮನಸ್ಥಿತಿಗೆ ಕನಕದಾಸರು ಇಂದಿಗೂ ಅನುಕರಣೀಯವಾಗಿದ್ದಾರೆ. ಹೀಗಾಗಿ ಇಡೀ ನಾಡು ಇಂದು ಈ ಮಹಾನ್ ದಾಸನನ್ನು ಸ್ಮರಿಸುತ್ತಿರುವುದು.
ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು. ನಾಡಿನೆಲ್ಲೆಡೆ ಅವರ ಜಯಂತಿ ಆಚರಿಸಲಾಗುತ್ತಿದೆ. ಹರಿಭಕ್ತ ಕನಕದಾಸರು 1509ರಲ್ಲಿ ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ್ದರು. ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗ ಇವರು. ಇವರ ಮೂಲ ಹೆಸರು ತಿಮ್ಮಪ್ಪ ನಾಯಕ. ತಿಮ್ಮಪ್ಪ ನಾಯಕ ಮೊದಲು ಯೋಧನಾಗಿದ್ದರು. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ವಿಜಯನಗರದ ಕೃಷ್ಣದೇವರಾಯನ ಆಶ್ರಯದಲ್ಲಿದ್ದರು. ಇವರಿಗೆ ಚಿನ್ನ ಸಿಕ್ಕಿದ್ದರಿಂದಾಗಿ ಇವರನ್ನು ಆನಂತರ ಕನಕ ಎಂದು ಕರೆಯಲಾಯಿತು. ವಿಜಯನಗರ ಅರಸರು ನಡೆಸಿದ್ದ ಯುದ್ಧವೊಂದರಲ್ಲಿ ಇವರು ಕೂಡ ಗಂಭೀರವಾಗಿ ಗಾಯಗೊಂಡಿದ್ದರು.

ಯುದ್ಧದಲ್ಲಿ ನಡೆದ ಹಿಂಸಾಚಾರ ಕಂಡು ತಿಮ್ಮಪ್ಪ ನಾಯಕ, ಕನಕದಾಸರಾಗಿ ಬದಲಾದರು. ಆನಂತರ ಕೈಯಲ್ಲಿ ತಂಬೂರಿ ಹಿಡಿದು ನಾಡಿನಾದ್ಯಂತ ಜನರನ್ನು ಎಚ್ಚರಿಸಲು ಆರಂಭಿಸಿದರು. ಹಿಂಸಾಚಾರ, ಜಾತಿ, ಧರ್ಮದಿಂದ ಬದುಕು ನಾಶ ಮಾಡಿಕೊಳ್ಳಬೇಡಿ ಎಂದು ಸಂದೇಶ ಸಾರಲು ಆರಂಭಿಸಿದರು. ಅವರ ಅಂದಿನ ಮಾತುಗಳು, ಅವರು ಮಾಡಿದ ಪ್ರಶ್ನೆಗಳು ಇಂದಿನ ಸಮಾಜಕ್ಕೂ ಕೇಳಬೇಕಾಗಿರುವ ಸ್ಥಿತಿ ಇರುವುದು ದುರಂತವೇ ಸರಿ.
ಕನಕದಾಸರು ಸ್ಥಳೀಯ ಭಾಷೆ ಕನ್ನಡದಲ್ಲಿ ಕೀರ್ತನೆಗಳನ್ನು ಹಾಡುವ ಮತ್ತು ರಚಿಸುವ ಮೂಲಕ ಸಂಪ್ರದಾಯಗಳನ್ನು ತಿರಸ್ಕರಿಸಿದರು. ಅವರ ಹಲವು ಹಾಡುಗಳು ಸಂಸ್ಕೃತದಲ್ಲೂ ಮೂಡಿ ಬಂದಿರುವುದು ವಿಶೇಷ. ಕನಕದಾಸರು ಹರಿದಾಸರ ನಿಕಟವರ್ತಿಯಾದ ದಾಸಕೂಟದ ಪ್ರಮುಖ ಸದಸ್ಯರಾಗಿದ್ದರು. ಆ ಸಂದರ್ಭದಲ್ಲಿ ವಿಭಿನ್ನ ಧಾರ್ಮಿಕ ಸಂಘಟನೆಯನ್ನು ಮುನ್ನಡೆಸುತ್ತಿದ್ದರು ವ್ಯಾಸಕೂಟವು ಸಂಸ್ಕೃತದಲ್ಲಿ ಚರ್ಚೆಗಳನ್ನು ನಡೆಸುವ ಮೇಲ್ವರ್ಗದ ಪಂಡಿತರನ್ನು ಒಳಗೊಂಡಿದ್ದರೆ, ದಾಸಕೂಟವು ಪವಿತ್ರ ಗ್ರಂಥಗಳ ಶುಷ್ಕ ಪಾಂಡಿತ್ಯವನ್ನು ಮುರಿದು ಸ್ಥಳೀಯ ಭಾಷೆಯಲ್ಲಿ ಹಾಡುವ ದಾಸರನ್ನು ಒಳಗೊಂಡಿತ್ತು. ಆ ಮೂಲಕ ಜನಸಾಮಾನ್ಯರೊಂದಿಗೆ ದಾಸ ಸಾಹಿತ್ಯ ತುಂಬಾ ಹತ್ತಿರವಾಯಿತು.
ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿವೆ. ಅವರು ತಮ್ಮ ರಚನೆಯ ಎಲ್ಲ ಹಾಡುಗಳಿಗೆ ‘ಕಾಗಿನೆಲೆ ಆದಿಕೇಶವ’ ಎಂಬ ಕಾವ್ಯನಾಮ ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಖ್ಯಾತ ಕೃತಿಗಳು. ಭಕ್ತಿ ಆಂದೋಲನದಲ್ಲಿ ಪ್ರಮುಖರಾಗಿ ಕನಕದಾಸರು ಪ್ರಚಾರ ಮಾಡಿದ್ದಾರೆ. ಅವರಿಗೆ ದೇವರ ಪೂಜೆಯಲ್ಲಿ, ದೇವಸ್ಥಾನಗಳ ನಿಯಮಗಳಲ್ಲಿ ಜಾತಿಗಳನ್ನು ತರುವುದು ಇಷ್ಟವಿರಲಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು.

ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರು. ಕನಕದಾಸರಿಗೂ ಉಡುಪಿಯ ಶ್ರೀಕೃಷ್ಣನ ಮಠಕ್ಕೂ ದೊಡ್ಡ ನಂಟಿದೆ. ಜಾತಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದ ಅಂದಿನ ಸಮಾಜದಲ್ಲಿ ಅನ್ಯ ಜಾತಿಯವರಿಗೆ ದೇವಸ್ಥಾನದ ಒಳಗೆ ಹೋಗಲು ಪ್ರವೇಶ ಇರಲಿಲ್ಲ. ಹೀಗಾಗಿ ಕನಕದಾಸರನ್ನು ಶ್ರೀಕೃಷ್ಣನ ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಕನಕದಾಸರು ಶ್ರೀಕೃಷ್ಣನನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಶ್ರೀಕೃಷ್ಣನು ಅವರನ್ನು ಪ್ರೀತಿಸುತ್ತಿದ್ದ. ಹೀಗಾಗಿ ಕೃಷ್ಣನ ದರ್ಶನ ಭಾಗ್ಯ ಪಡೆಯದೇ ಹತಾಶೆಯಿಂದ ದೇವಸ್ಥಾನದಿಂದ ಹೊರಡುತ್ತಿದ್ದ ಕನಕದಾಸರಿಗೆ ಶ್ರೀಕೃಷ್ಣನು ತಿರುಗಿ ಗೋಡೆಯ ಒಂದು ಕಿಂಡಿಯ ಮೂಲಕ ತನ್ನ ದರ್ಶನವನ್ನು ಕರುಣಿಸಿದ್ದಾರೆ ಎಂಬ ನಂಬಿಕೆ ಇಂದಿಗೂ ಇದೆ. ಹೀಗಾಗಿ ಇಂದಿಗೂ ಕೃಷ್ಣನ ದೇವಸ್ಥಾನದ ಮುಖ್ಯ ಬಾಗಿಲನ್ನು ಮುಚ್ಚಲಾಗಿದೆ. ಹೀಗಾಗಿ ಶ್ರೀಕೃಷ್ಣ ದರ್ಶನ ನೀಡಿದ ಆ ಕಿಂಡಿಯನ್ನು ‘ಕನಕನ ಕಿಂಡಿ’ ಎಂದು ಇಂದಿಗೂ ಕರೆಯಲಾಗುತ್ತಿದೆ.
ಇಂದಿಗೂ ಭಕ್ತರು ಈ ಕಿಟಕಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡುತ್ತಾರೆ. ಸಮಾಜದಲ್ಲಿ ಬೇರೂರಿ ಹಲವರ ಶೋಷಣೆಗಳಿಗೆ ಕಾರಣವಾಗುತ್ತಿದ್ದ ಜಾತಿ, ಧರ್ಮ, ಮೇಲು-ಕೀಳು ತೊಡೆದು ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದ ಇಂತಹ ಮಹಾನ್ ದಾಸನ ಜಯಂತಿ ಇಂದು. ಇದು ಕೇವಲ ಜಯಂತಿ ಆಗಿ ಆಚರಣೆಯಾಗದೆ, ಅನುಕರಣೆಯ ದಿನವಾಗಲಿ. ಎಲ್ಲರಲ್ಲೂ ನಾವೆಲ್ಲ ಒಂದು. ಜಾತಿ -ಧರ್ಮದ ಹಂಗು ನಮಗೆ ಬೇಡ ಎಂಬ ಜಾಗೃತಿ ಮೂಡುವಂತಾಗಲಿ ಎಂಬುವುದೇ ನಮ್ಮ ಆಶಯ.