ಭಾರೀ ಬಜೆಟ್ ನಲ್ಲಿ ಮೂಡಿ ಬಂದಿದ್ದ ನಟ ಸೂರ್ಯ ಅಭಿನಯದ ಕಂಗುವ ಚಿತ್ರ ಬಿಡುಗಡೆಯಾಗಿದ್ದು, ಮೊದಲ ದಿನ ನಿರಾಶೆ ಮೂಡಿಸಿದೆ.
ಈ ಸಿನಿಮಾ ಬರೋಬ್ಬರಿ 350 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇತ್ತು. ಗುರುವಾರ ಚಿತ್ರ ಬಿಡುಗಡೆಯಾಗಿದ್ದು, ಮೊದಲ ದಿನ ಮಾತ್ರ ನಿರಾಶೆ ಅನುಭವಿಸಿದೆ. ಈ ಚಿತ್ರ ಮೊದಲ ದಿನ ಕೇವಲ 22 ಕೋಟಿ ರೂ. ಗಳಿಕೆ ಮಾಡಿದೆ. ಮೊದಲ ದಿನವೇ ನಿರಾಸೆ ಕಾಡಿದ್ದರಿಂದಾಗಿ ಚಿತ್ರವು ಮುಂದಿನ ದಿನಗಳಲ್ಲಿ ಹಾಕಿರುವ ಬಂಡವಾಳವನ್ನಾದರೂ ತೆಗೆಯಬಹುದಾ? ಎಂಬ ಆತಂಕ ಈಗ ನಿರ್ಮಾಪಕರದ್ದಾಗಿದೆ.
ಈ ಸಿನಿಮಾ ಕೇವಲ ತಮಿಳು ಮಾತ್ರವಲ್ಲದೇ, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆದರೂ ಚಿತ್ರವು ಅಭಿಮಾನಿಗಳ ಮನಸ್ಸು ಗೆದ್ದು, ಹಣ ಗಳಿಸುವಲ್ಲಿ ಹಿಂದೆ ಬಿದ್ದಿದೆ. ನಟ ಸೂರ್ಯ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದರೆ, ಚಿತ್ರರಂಗದಲ್ಲಿ ಉತ್ತಮ ಹೆಸರು ಇದೆ. ಹೀಗಾಗಿ ಕಂಗುವ ಚಿತ್ರದ ಮೇಲೆ ನಿರೀಕ್ಷೆ ಇಡಲಾಗಿತ್ತು. ಈ ನಂಬಿಕೆಯಿಂದಲೇ ನಿರ್ಮಾಪಕರು ಸಾಕಷ್ಟು ಬಂಡವಾಳ ಹಾಕಿದ್ದರು.
ಆದರೆ, ಈಗ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ. ಸಿನಿಮಾಗೆ ಎಲ್ಲ ಕಡೆಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಿನಿಮಾ ನೋಡಲು ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ತಮಿಳುನಾಡಿನಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ.
ಈ ಚಿತ್ರ ತಮಿಳುನಾಡಿನಲ್ಲಿ 13.65 ಕೋಟಿ ರೂ. ಸೇರಿದಂತೆ 22 ಕೋಟಿ ರೂ. ಗಳಿಕೆ ಮಾಡಿದೆ. ಇಂದು ಶಿವರಾಜಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಕಂಗುವ ಚಿತ್ರಕ್ಕೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ. ಬುಕ್ ಮೈ ಶೋನಲ್ಲಿ ‘ಕಂಗುವ’ ಚಿತ್ರ 6.9 ರೇಟಿಂಗ್ ಪಡೆದಿದೆ. ನಿರ್ದೇಶಕ ಶಿವ ಅವರು ಈ ಚಿತ್ರದ ಮೂಲಕ ಸೋಲು ಕಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳು ಕಂಗುವಾ ಚಿತ್ರವನ್ನು ಯಾವ ರೀತಿ ನೋಡುತ್ತಾರೆ ಕಾಯ್ದು ನೋಡಬೇಕಿದೆ.