ಮುಂಬೈ: ಒಂದು ಕಾಲದಲ್ಲಿ 26/11ರ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಉಗ್ರರ ವಿರುದ್ಧ ಹೋರಾಡಿ ಸೈ ಎನಿಸಿಕೊಂಡಿದ್ದ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ಮಾಜಿ ಕಮಾಂಡೋ, ಈಗ ಮಾದಕ ವಸ್ತು ಕಳ್ಳಸಾಗಣೆ ಜಾಲದ ಕಿಂಗ್ಪಿನ್ ಆಗಿರುವಂಥ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಬಜರಂಗ್ ಸಿಂಗ್ ಎಂಬ ಈ ಮಾಜಿ ಕಮಾಂಡೋನನ್ನು ರಾಜಸ್ಥಾನ ಪೊಲೀಸರು 200 ಕೆ.ಜಿ. ಗಾಂಜಾದೊಂದಿಗೆ ಚುರು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬಜರಂಗ್ ಸಿಂಗ್ ತೆಲಂಗಾಣ ಮತ್ತು ಒಡಿಶಾದಿಂದ ರಾಜಸ್ಥಾನಕ್ಕೆ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಜಾಲದ ಮುಖ್ಯಸ್ಥನಾಗಿದ್ದ ಎಂದು ಪೊಲೀಸ್ ಮಹಾನಿರೀಕ್ಷಕ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಸಿಕರ್ ಜಿಲ್ಲೆಯ ನಿವಾಸಿಯಾದ ಸಿಂಗ್ನ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಅವನ ಸುಳಿವು ನೀಡಿದವರಿಗೆ 25,000 ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.
ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಗ್ರಹ ಕಾರ್ಯಪಡೆ ನಡೆಸಿದ ಕಾರ್ಯಾಚರಣೆಯಲ್ಲಿ, ಎರಡು ತಿಂಗಳ ಸತತ ಪ್ರಯತ್ನದ ನಂತರ ಬಜರಂಗ್ ಸಿಂಗ್ನನ್ನು ಬಂಧಿಸಲಾಗಿದೆ.
6 ಅಡಿ ಎತ್ತರದಿಂದಾಗಿ ಕಮಾಂಡೋ ಆದ
ಬಜರಂಗ್ ಸಿಂಗ್ 10ನೇ ತರಗತಿಯ ನಂತರ ಓದು ನಿಲ್ಲಿಸಿದ್ದ. ಆದರೆ, ತನ್ನ ಆರು ಅಡಿ ಎತ್ತರದ ದೇಹ ಮತ್ತು ಫಿಟ್ನೆಸ್ನಿಂದಾಗಿ ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ಸೇರಲು ಸಾಧ್ಯವಾಯಿತು. ಬಿಎಸ್ಎಫ್ ಕಾನ್ಸ್ಟೆಬಲ್ ಆಗಿ ಪಂಜಾಬ್, ಅಸ್ಸಾಂ, ರಾಜಸ್ಥಾನ, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಸೇವೆ ಸಲ್ಲಿಸಿ, ದೇಶದ ಗಡಿಗಳನ್ನು ನುಸುಳುಕೋರರಿಂದ ಮತ್ತು ಮಾವೋವಾದಿಗಳಿಂದ ರಕ್ಷಿಸಿದ್ದ.
ಅವನ ದೇಶಭಕ್ತಿಯನ್ನು ಗಮನಿಸಿದ ಅಧಿಕಾರಿಗಳು, ದೇಶದ ಗಣ್ಯ ಭಯೋತ್ಪಾದನಾ ನಿಗ್ರಹ ಪಡೆಯಾದ ಎನ್ಎಸ್ಜಿಗೆ ಅವನನ್ನು ಆಯ್ಕೆ ಮಾಡಿದರು. ಅಲ್ಲಿ ಏಳು ವರ್ಷಗಳ ಕಾಲ ಕಮಾಂಡೋ ಆಗಿ ಸೇವೆ ಸಲ್ಲಿಸಿದ್ದ. 2008ರಲ್ಲಿ ನಡೆದ 26/11ರ ಮುಂಬೈ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿಯೂ ಆತ ಭಾಗವಹಿಸಿದ್ದ.
ರಾಜಕೀಯದಿಂದ ಅಪರಾಧ ಜಗತ್ತಿಗೆ
2021ರಲ್ಲಿ ಬಜರಂಗ್ ಸಿಂಗ್ಗೆ ರಾಜಕೀಯದ ಆಸೆ ಚಿಗುರಿತು. ರಾಜಸ್ಥಾನದ ತನ್ನ ಹಳ್ಳಿಗೆ ಹಿಂತಿರುಗಿ, ಒಂದು ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತನಾದ. ಗ್ರಾಮದ ಚುನಾವಣೆಯಲ್ಲಿ ತನ್ನ ಹೆಂಡತಿಯನ್ನು ಕಣಕ್ಕಿಳಿಸಿದನಾದರೂ, ಆಕೆ ಸೋತಳು. ಇದೇ ಅವಧಿಯಲ್ಲಿ, ಅವನಿಗೆ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಸಂಪರ್ಕವಾಯಿತು. ಅವರಲ್ಲೊಬ್ಬನಿಂದ ಗಾಂಜಾ ವ್ಯವಹಾರದಲ್ಲಿನ ಹಣದ ಲಾಭದ ಬಗ್ಗೆ ತಿಳಿದುಕೊಂಡ. ಒಡಿಶಾದಲ್ಲಿನ ತನ್ನ ಹಳೆಯ ಸಂಪರ್ಕಗಳನ್ನು ಮತ್ತು ಬಿಎಸ್ಎಫ್ ಅನುಭವವನ್ನು ಬಳಸಿಕೊಂಡು, ಕೆಲವೇ ವರ್ಷಗಳಲ್ಲಿ ಗಾಂಜಾ ಸಿಂಡಿಕೇಟ್ನ ಕಿಂಗ್ಪಿನ್ ಆಗಿ ಬೆಳೆದುಬಿಟ್ಟ.
ಬಂಧಿಸಿದ್ದು ಹೇಗೆ?
ಕಳೆದ ಎರಡು ತಿಂಗಳಿಂದ ಎಟಿಎಸ್ ಮತ್ತು ಎಎನ್ಟಿಎಫ್ ತಂಡಗಳು ಬಜರಂಗ್ ಸಿಂಗ್ನ ಬೆನ್ನು ಹತ್ತಿದ್ದವು. ನಕಲಿ ಮೊಬೈಲ್ ಐಡಿಗಳನ್ನು ಬಳಸಿ, ದೂರದ ಹಳ್ಳಿಗಳಲ್ಲಿ ಅಡಗಿಕೊಂಡು ಆತ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಪೊಲೀಸರು ಆತನ ಅಡುಗೆಯವನ ಮೂಲಕ ಸುಳಿವು ಪತ್ತೆಹಚ್ಚಿದರು. ತಾಂತ್ರಿಕ ಗುಪ್ತಚರ ತಂಡವು ಅಡುಗೆಯವನ ಸಂವಹನಗಳನ್ನು ಪರಿಶೀಲಿಸಿದಾಗ, ಚುರು ಜಿಲ್ಲೆಯ ರತನ್ಗಢದಲ್ಲಿ ಸಿಂಗ್ ಇರಬಹುದೆಂಬ ಸುಳಿವು ಸಿಕ್ಕಿತು. ಬುಧವಾರ ಬೈಕ್ನಲ್ಲಿ ಹೋಗುತ್ತಿದ್ದ ಸಿಂಗ್ನನ್ನು ಪತ್ತೆಹಚ್ಚಿದ ಪೊಲೀಸರು, ಆತನನ್ನು ತಕ್ಷಣ ಬಂಧಿಸದೆ, ರಹಸ್ಯವಾಗಿ ಹಿಂಬಾಲಿಸಿದರು. ನಂತರ, ಸರಿಯಾದ ಯೋಜನೆ ರೂಪಿಸಿ, ಆತನ ಅಡಗುತಾಣದ ಮೇಲೆ ಹಠಾತ್ ದಾಳಿ ನಡೆಸಿ ಬಂಧಿಸಿದರು.
“ಹಲವಾರು ವಾರಗಳ ಯೋಜನೆ ಮತ್ತು ಗುಪ್ತಚರ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಜರಂಗ್ನಂತಹ ಅಪರಾಧಿಯ ಬಂಧನವು ರಾಜಸ್ಥಾನದಲ್ಲಿನ ಭಯೋತ್ಪಾದನೆ-ಮಾದಕವಸ್ತು ಜಾಲವನ್ನು ತಟಸ್ಥಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ” ಎಂದು ಐಜಿಪಿ ಕುಮಾರ್ ಹೇಳಿದ್ದಾರೆ.



















