ಬೆಂಗಳೂರು: 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ತಂಡವು ಶೀಘ್ರ ನಿರ್ಗಮನ ಹೊಂದಿರುವುದರಿಂದ ವ್ಯಾಪಕ ಟೀಕೆಯನ್ನು ಎದುರಿಸುವಂತಾಗಿದೆ. ನ್ಯೂಜಿಲ್ಯಾಂಡ್ ಮತ್ತು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಭಾರತ ವಿರುದ್ಧ ಸೋತಿದ್ದು ದೊಡ್ಡ ಹಿನ್ನಡೆಯಾಗಿದೆ. ಇದರಿಂದಾಗಿ ಪಾಕಿಸ್ತಾನ ತಂಡದ ಮೇಲೆ ಭರವಸೆ ಇಟ್ಟಿದ್ದ ಅಭಿಮಾನಿಗಳು ಮತ್ತು ತಜ್ಞರು ನಿರಾಸೆಗೊಂಡಿದ್ದಾರೆ. ವಿಶೇಷವಾಗಿ, ಪಾಕಿಸ್ತಾನ ಈ ಟೂರ್ನಮೆಂಟ್‌ನ ಆತಿಥೇಯ ರಾಷ್ಟ್ರವಾಗಿರುವುದರಿಂದ ಅವರಿಂದ ಹೆಚ್ಚಿನ ನಿರೀಕ್ಷೆ ಇತ್ತು.
ಈ ಕುರಿತು ಅನೇಕ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ವಸೀಮ್ ಅಕ್ರಂ ಕೂಡ ಈ ಪೈಕಿ ಒಬ್ಬರಾಗಿದ್ದಾರೆ. 58 ವರ್ಷದ ಈ ಮಾಜಿ ವೇಗದ ಬೌಲರ್, ಪಾಕಿಸ್ತಾನದ ಬೌಲಿಂಗ್ ದಾಳಿಯ ಬಗ್ಗೆ ಕಟು ಟೀಕೆ ಮಾಡಿದ್ದಾರೆ. ಅಲ್ಲದೇ, ಆಟಗಾರರ ಆಹಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷವಾಗಿ, ಭಾರತ ವಿರುದ್ಧದ ಪಂದ್ಯದ ವೇಳೆ ಪಾನೀಯ ವಿರಾಮದ ಸಮಯದಲ್ಲಿ ಆಟಗಾರರಿಗೆ ಒಂದು ತಟ್ಟೆಯಷ್ಟು ಬಾಳೆಹಣ್ಣನ್ನು ತಂದುಕೊಟ್ಟಿದ್ದರು. ಅಷ್ಟೊಂದು ತಿಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ನಾನು ಮೊದಲ ಮತ್ತು ಎರಡನೇ ಪಾನೀಯ ವಿರಾಮ ನೋಡುತ್ತಿದ್ದೆ, ಆ ಸಮಯದಲ್ಲಿ ಆಟಗಾರರಿಗೆ ತುಂಬಾ ಬಾಳೆಹಣ್ಣುಗಳಿದ್ದ ಒಂದು ತಟ್ಟೆ ತರಲಾಗಿತ್ತು. ಇಷ್ಟು ಬಾಳೆ ಹಣ್ಣುಗಳನ್ನು ಕೋತಿಯೂ ತಿನ್ನುವುದಿಲ್ಲ ಇದು ಅವರ ಆಹಾರ! ನಮ್ಮ ಕಾಲದಲ್ಲಿ ಇಷ್ಟೊಂದು ತಿನ್ನುವುದನ್ನು ಕಂಡರೆ ನಮ್ಮ ನಾಯಕ ಇಮ್ರಾನ್ ಖಾನ್, ಹೊಡೆಯುತ್ತಿದ್ದರು ಎಂದು ಅಕ್ರಂ ಪಂದ್ಯಾನಂತರದ ಚರ್ಚೆಯಲ್ಲಿ ಹೇಳಿದ್ದಾರೆ.
ಪಾಕಿಸ್ತಾನವು ಯಾವುದೋ ಹಳೆ ಕಾಲದ ಕ್ರಿಕೆಟ್ ಆಡುತ್ತಿದೆ ಎಂದು ವಸೀಮ್ ಅಕ್ರಂ ಹೇಳಿದರು.
ಅಕ್ರಂ ಪಾಕಿಸ್ತಾನದ ಆಟದ ಶೈಲಿಯ ಬಗ್ಗೆ ಟೀಕಿಸಿದ್ದಾರೆ. ಅವರ ಕ್ರಿಕೆಟ್ ಹಲವಾರು ವರ್ಷಗಳ ಹಳೆಯ ತಂತ್ರದಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಪಾಕ್ ತಂಡಕ್ಕೆ ಧೈರ್ಯಶಾಲಿ, ಯುವ ಆಟಗಾರರನ್ನು ಸೇರಿಸುವ ಅಗತ್ಯವಿದೆ. ದೊಡ್ಡ ಬದಲಾವಣೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳ ಅಗತ್ಯವಿದೆ. ನಾವು ಚುರಕಿನ ಕ್ರಿಕೆಟ್‌ನಲ್ಲಿ ಹಳೆಯ ಶೈಲಿಯ ಆಟವನ್ನೇ ಆಡುತ್ತಾ ಬಂದರೆ ಸರಿಯಲ್ಲ. ಈ ವೈಖರಿ ಬದಲಾಯಿಸಬೇಕು. ಧೈರ್ಯಶಾಲಿ, ಯುವ ಆಟಗಾರರನ್ನು ತಂಡಕ್ಕೆ ಸೇರಿಸಬೇಕು. ನೀವು ಐದು-ಆರು ಬದಲಾವಣೆಗಳನ್ನು ಮಾಡಬೇಕಾದರೂ, ಈಗಲೇ ಮಾಡಿ. ಮುಂದಿನ ಆರು ತಿಂಗಳು ತಂಡ ಸೋತರೂ ಪರವಾಗಿಲ್ಲ, ಆದರೆ ಈಗಿನಿಂದಲೇ 2026ರ ಟಿ20 ವಿಶ್ವಕಪ್‌ಗೆ ತಂಡವನ್ನು ತಯಾರಿಸಲು ಪ್ರಾರಂಭಿಸಿ ಎಂದು ಅಕ್ರಂ ಸಲಹೆ ನೀಡಿದ್ದಾರೆ.