ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಂತಿಮವಾಗಿ ಗೆಲುವು ಸಾಧಿಸಿರಬಹುದು, ಆದರೆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯ ಆಟಗಾರರು ತೋರಿದ ಕಳಪೆ ಫೀಲ್ಡಿಂಗ್ ಪ್ರದರ್ಶನವು ತೀವ್ರ ಟೀಕೆಗೆ ಗುರಿಯಾಗಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಸೂಪರ್ ಫೋರ್ ಪಂದ್ಯದಲ್ಲಿ, ಭಾರತದ ಫೀಲ್ಡರ್‌ಗಳು ಬರೋಬ್ಬರಿ 3 ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಈ ಅವಕಾಶಗಳನ್ನು ಬಳಸಿಕೊಂಡ ಪಾಕಿಸ್ತಾನ, ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿ, ಭಾರತದ ಮೇಲೆ ಒತ್ತಡ ಹೇರಿತು.
ಭಾರತದ ಫೀಲ್ಡಿಂಗ್ ವೈಫಲ್ಯದ ಸರಣಿ ಆರಂಭವಾದದ್ದು ಪಂದ್ಯದ ಮೊದಲ ಓವರ್‌ನಲ್ಲೇ. ಹಾರ್ದಿಕ್ ಪಾಂಡ್ಯ ಎಸೆದ ಓವರ್‌ನಲ್ಲಿ, ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ನೀಡಿದ ಕ್ಯಾಚ್ ಅನ್ನು ಅಭಿಷೇಕ್ ಶರ್ಮಾ ಕೈಚೆಲ್ಲಿದರು. ಫರ್ಹಾನ್ ಆಗ ಶೂನ್ಯ ಸಂಪಾದನೆಯಲ್ಲಿದ್ದರು. ಮುಂದೆ ಜಿಗಿದು ಕ್ಯಾಚ್ ಹಿಡಿಯಲು ಯತ್ನಿಸಿದರೂ, ಚೆಂಡು ಅವರ ಕೈಗಳಿಂದ ಜಾರಿಹೋಯಿತು. ಈ ಜೀವದಾನದ ಸಂಪೂರ್ಣ ಲಾಭ ಪಡೆದ ಫರ್ಹಾನ್, ನಂತರ 34 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ,
ಪಾಕಿಸ್ತಾನದ ಇನ್ನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿದರ.
ಬಳಿಕ, 5ನೇ ಓವರ್‌ನಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆತದಲ್ಲಿ, ಮತ್ತೊಬ್ಬ ಪಾಕ್ ಆರಂಭಿಕ ಸೈಮ್ ಆಯೂಬ್ ಟಾಪ್ ಎಡ್ಜ್ ಮಾಡಿದರು. ಶಾರ್ಟ್ ಫೈನ್ ಲೆಗ್‌ನಲ್ಲಿದ್ದ ಕುಲದೀಪ್ ಯಾದವ್‌ಗೆ ಇದು ಸುಲಭವಾದ ಕ್ಯಾಚ್ ಆಗಿತ್ತು. ಆದರೆ, ಅವರೂ ಸಹ ಈ ಸರಳ ಕ್ಯಾಚ್ ಅನ್ನು ನೆಲಕ್ಕೆ ಬಿಟ್ಟರು. ಆಗ ಆಯೂಬ್ ಕೇವಲ 4 ರನ್ ಗಳಿಸಿದ್ದರು
8ನೇ ಓವರ್‌ನಲ್ಲಿ ಭಾರತದ ಕಳಪೆ ಫೀಲ್ಡಿಂಗ್ ಮತ್ತೊಮ್ಮೆ ಮುಂದುವರೆಯಿತು. ವರುಣ್ ಚಕ್ರವರ್ತಿ ಎಸೆತವನ್ನು ಲಾಂಗ್ ಆನ್‌ನತ್ತ ಬಾರಿಸಿದ ಫರ್ಹಾನ್, ಮತ್ತೊಮ್ಮೆ ಕ್ಯಾಚ್ ನೀಡಿದರು. ಈ ಬಾರಿ, ಲಾಂಗ್ ಆನ್‌ನಲ್ಲಿದ್ದ ಅಭಿಷೇಕ್ ಶರ್ಮಾ ಚೆಂಡನ್ನು ಹಿಡಿಯಲು ಯತ್ನಿಸಿದರಾದರೂ, ಅವರ ಕೈಗೆ ತಾಗಿದ ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್ ಆಯಿತು. ಈ ರೀತಿ ಪದೇ ಪದೇ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ಭಾರತೀಯ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರ ಬೇಜವಾಬ್ದಾರಿ ಫೀಲ್ಡಿಂಗ್ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಅಂತಿಮವಾಗಿ, ಕೈಚೆಲ್ಲಿದ ಕ್ಯಾಚ್‌ಗಳ ಹೊರತಾಗಿಯೂ ಭಾರತದ ಬೌಲರ್‌ಗಳು ಪಾಕಿಸ್ತಾನವನ್ನು 171 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು ಮತ್ತು ಭಾರತ ಪಂದ್ಯವನ್ನು ಗೆದ್ದುಕೊಂಡಿತು.