ಮದನಪಲ್ಲಿ (ಆಂಧ್ರಪ್ರದೇಶ) : ಏಳು ವರ್ಷದ ಬಾಲಕಿಯ ಮೇಲೆ ನೆರೆಮನೆಯ ವ್ಯಕ್ತಿಯೊಬ್ಬ ರಾಕ್ಷಸೀಯ ಕೃತ್ಯ ಎಸಗಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗುವಿನ ಮೇಲೆ ಅತ್ಯಾ*ಚಾರ ಎಸಗಿ, ಬಳಿಕ ಆಕೆಯನ್ನು ಹತ್ಯೆ ಮಾಡಿರುವ ಘೋರ ಘಟನೆ ಇಲ್ಲಿನ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪಟ್ಟಣದಲ್ಲಿ ನಡೆದಿದೆ. ಬಾಲಕಿಯ ಶವವು ಆರೋಪಿಯ ಮನೆಯಲ್ಲಿದ್ದ ನೀರಿನ ಡ್ರಮ್‌ನಲ್ಲಿ ಪತ್ತೆಯಾಗಿದೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಡ್ರಮ್‌ನಲ್ಲಿತ್ತು ಕಂದಮ್ಮನ ಶವ
2ನೇ ತರಗತಿ ಓದುತ್ತಿದ್ದ ಬಾಲಕಿಯು ಸೋಮವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದಳು. ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇಡೀ ಪಟ್ಟಣದಲ್ಲಿ ಶೋಧ ಕಾರ್ಯ ಆರಂಭಿಸಲಾಗಿತ್ತು. ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ನೆರೆಮನೆಯ ಕುಲವರ್ಧನ್ (30) ಎಂಬಾತನ ಮೇಲೆ ಅನುಮಾನಗೊಂಡು ಆತನ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಪೊಲೀಸರು ಆತನ ಮನೆಯ ಬಾಗಿಲು ಮುರಿದು ಒಳಹೋದಾಗ, ನೀರಿನ ಡ್ರಮ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದ ಆರೋಪಿಯು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹೆದ್ದಾರಿ ಬಂದ್ ಮಾಡಿ ಸಾರ್ವಜನಿಕರ ಆಕ್ರೋಶ
ಈ ಅಮಾನುಷ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮದನಪಲ್ಲಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ಗಂಟೆಗಳ ಕಾಲ ಬಂದ್ ಮಾಡಿದ ಪ್ರತಿಭಟನಾಕಾರರು, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಮತ್ತು ಆತನಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ ಪೋಷಕರು ಮರಣೋತ್ತರ ಪರೀಕ್ಷೆಗೆ ಶವವನ್ನು ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರ ಸಂಧಾನದ ನಂತರ ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಆರೋಪಿಯ ಶವವೂ ಪತ್ತೆ? ತನಿಖೆ ತೀವ್ರ
ಇದೆಲ್ಲದರ ಬೆನ್ನಲ್ಲೇ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಗ್ರಾಮದ ಹತ್ತಿರದ ನೀರಿನ ಟ್ಯಾಂಕ್‌ವೊಂದರಲ್ಲಿ ಮತ್ತೊಂದು ಅಪರಿಚಿತ ಶವ ಪತ್ತೆಯಾಗಿದೆ. ಇದು ಬಾಲಕಿಯ ಮೇಲೆ ಕೃತ್ಯ ಎಸಗಿದ ಆರೋಪಿ ಕುಲವರ್ಧನ್ ಶವವಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಬೇರೇನಾದರೂ ಸಂಭವಿಸಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಕೊಲೆ ನಡೆದ ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳನ್ನು ಹತ್ತಿಕ್ಕಲು ಹೊರಟ ಸರ್ಕಾರ!



















