ಬೆಂಗಳೂರು: ಹನಿಟ್ರ್ಯಾಪ್ ಗೊಂದಲ ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲವರು ಆಂತರಿಕವಾಗಿ ಕಚ್ಚಾಡುವ ಮಟ್ಟಕ್ಕೆ ಹೋಗಿ ನಿಂತಿದೆ. ವಿಪಕ್ಷಗಳು ಇದನ್ನೇ ಬಂಡವಾಳ ಮಾಡಿಟ್ಟುಕೊಂಡು ತಿರುಗೇಟು ಕೊಡುತ್ತಿವೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಖರ್ಗೆ ಹನಿಟ್ರ್ಯಾಪ್ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಸರ್ಕಾರಕ್ಕೆ ಸವಾಲು ಎದುರಾಗುವ ಸಾಧ್ಯತೆ ಇದ್ದರೆ, ಚರ್ಚಿಸಲು ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಕಲಾಪದಲ್ಲಿ ಗುರುವಾರ ರಾಜಣ್ಣ ತಮ್ಮ ವಿರುದ್ಧ ಹನಿಟ್ರ್ಯಾಪ್ ನಡೆದಿದ್ದು, ಅದಕ್ಕೆ ದಾಖಲೆಗಳಿರುವುದಾಗಿಯೂ ಹೇಳಿದ್ದರು. ನ್ಯಾಯಾಧೀಶರು ಸೇರಿದಂತೆ 48 ಜನರನ್ನು ಖೆಡ್ಡಾಗೆ ಕೆಡವಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟಾಗುವಂತೆ ಕಾಣುತ್ತಿದೆ. ಹೀಗಾಗಿ ಖರ್ಗೆ ಈ ಕುರಿತು ಸಲಹೆ ನೀಡಿದ್ದಾರೆ.
ಹನಿಟ್ರ್ಯಾಪ್ ವಿಚಾರದ ಗೊಂದಲವನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಗೊಂದಲವಿದ್ದರೆ ಹಾಗೂ ಕೆಪಿಸಿಸಿ ಪುನಾರಚನೆ ಸೇರಿದಂತೆ ಯಾವುದೇ ಗಂಭೀರ ವಿಚಾರಗಳ ಕುರಿತು ಚರ್ಚಿಸಬೇಕಾದರೆ ಸಿಎಂ ಹಾಗೂ ಡಿಸಿಎಂ ದೆಹಲಿಗೆ ಬರಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಹನಿಟ್ರ್ಯಾಪ್ ವಿಚಾರ ದಿಲ್ಲಿ ನಾಯಕರ ಅಂಗಳ ತಲುಪಿದೆ ಎನ್ನುವಂತಾಗಿದೆ. ಮುಂದೆ ಇದು ಯಾವ ಹಾದಿಗೆ ಹೋಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.