ನವದೆಹಲಿ: ಕರ್ನಾಟಕದಲ್ಲಿ ಈಗ ಹನಿಟ್ರ್ಯಾಪ್ ಭಾರಿ ಸದ್ದು ಮಾಡುತ್ತಿದೆ. “ನೀಲಿ ಜೀನ್ಸ್ ತೊಟ್ಟಿದ್ದ ಯುವತಿ ಹನಿಟ್ರ್ಯಾಪ್ ಗೆ ಯತ್ನಿಸಿದ್ದಳು” ಎಂದು ಸಚಿವರೇ ಹೇಳಿದ್ದಾರೆ. ಇದರ ಮಧ್ಯೆಯೇ, ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬರು ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಯೊಬ್ಬಳ ಬಲೆಗೆ ಬಿದ್ದು 6.5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ನೋಯ್ಡಾ ಸೆಕ್ಟರ್ 36ರ ನಿವಾಸಿಯಾಗಿರುವ ಉದ್ಯಮಿ ದಲ್ಜಿತ್ ಸಿಂಗ್ ಎಂಬುವವರೇ ಮೋಸ ಹೋಗಿದ್ದಾರೆ. ಇವರು ಮಹಿಳೆಯ ಮಾತು ನಂಬಿ ಟ್ರೇಡಿಂಗ್ ಆ್ಯಪ್ ನಲ್ಲಿಹಣ ಹೂಡಿಕೆ ಮಾಡುವ ಮೂಲಕ ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಸೈಬರ್ ಪೊಲೀಸರಿಗೆ ಸಂತ್ರಸ್ತ ದಲ್ಜಿತ್ ಸಿಂಗ್ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ದಲ್ಜಿತ್ ಸಿಂಗ್ ಅವರು ಕಳೆದ ವರ್ಷ ಡೇಟಿಂಗ್ ಆ್ಯಪ್ ನಲ್ಲಿಅನಿತಾ ಚೌಹಾಣ್ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆತ್ಮೀಯತೆ ಮೂಡಿತ್ತು. ಗಂಟೆಗಟ್ಟಲೆ ಆಕೆಯ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಆದರೆ, ಇದೇ ಅವರಿಗೆ ಪಾಶವಾಗಿ ಪರಿಣಮಿಸಿದೆ.
ಅನಿತಾ ಚೌಹಾಣ್ ಮಾತು ನಂಬಿ ಟ್ರೇಡಿಂಗ್ ಆ್ಯಪ್ ನಲ್ಲಿ ಮೊದಲಿಗೆ 3.2 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಬಳಿಕ ಮತ್ತಷ್ಟು ಹಣವನ್ನು ತೊಡಗಿಸುವ ಮೂಲಕ ಒಟ್ಟಾರೆ 6.52 ಕೋಟಿ ರೂ.ಹಣವನ್ನು ಹೂಡಿಕೆ ಮಾಡಿದ್ದಾರೆ. ಹಣವನ್ನು ಡ್ರಾ ಮಾಡಲು ಪ್ರಯತ್ನಿಸಿದಾಗ ಶೇ.30ರಷ್ಟು ಭದ್ರತಾ ಶುಲ್ಕ ಪಾವತಿ ಸೇರಿದಂತೆ 61 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಲಾಗಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಸೈಬರ್ ವಂಚನೆಯ ಜಾಲಕ್ಕೆ ಸಿಲುಕಿ, ಹಣ ಕಳೆದುಕೊಂಡಿರುವುದು ಅರಿವಿಗೆ ಬಂದಿದೆ. ಬಳಿಕ ದಲ್ಜಿತ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.